ಕರ್ನಾಟಕ

karnataka

ETV Bharat / state

ಕೆ.ಆರ್​​.ಪೇಟೆ ಉಪ ಸಮರ... ಗಮನ ಸೆಳೆದ ಮತಗಟ್ಟೆಗಳು, ಸ್ವಾರಸ್ಯಕರ ಘಟನೆಗಳು

ಮಂಡ್ಯ ಜಿಲ್ಲೆಯ ಕೆ.ಆರ್​ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆದಿದ್ದು, ಬೆಳಿಗ್ಗೆಯಿಂದ ಸಂಜೆಯವರೆಗಿನ ಮತದಾನದ ಅವಧಿಯಲ್ಲಿ ಕ್ಷೇತ್ರದ ಮತಗಟ್ಟೆಗಳಲ್ಲಿ ಕೆಲವೊಂದು ವಿಶೇಷ ಘಟನೆಗಳು ನಡೆದಿವೆ. ಕೆಲವೊಂದು ಯಡವಟ್ಟುಗಳು ಮತ್ತು ಕೆಲವೊಂದು ಸ್ವಾರಸ್ಯಕರ ಘಟನೆಗಳಿಗೆ ಮತಗಟ್ಟೆಗಳು ಸಾಕ್ಷಿಯಾದವು.

By

Published : Dec 5, 2019, 6:10 PM IST

mandya-kr-pete-bypoll
ಗಮನಸೆಳೆದ ಮಂಡ್ಯದ ಮತಗಟ್ಟೆಗಳು

ಮಂಡ್ಯ:ಜಿಲ್ಲೆಯ ಕೆ.ಆರ್​ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆದಿದ್ದು, ಬೆಳಿಗ್ಗೆಯಿಂದ ಸಂಜೆಯವರೆಗಿನ ಮತದಾನದ ಅವಧಿಯಲ್ಲಿ ಕ್ಷೇತ್ರದ ಮತಗಟ್ಟೆಗಳಲ್ಲಿ ಕೆಲವೊಂದು ವಿಶೇಷ ಘಟನೆಗಳು ನಡೆದಿವೆ. ಕೆಲವೊಂದು ಯಡವಟ್ಟುಗಳು ಮತ್ತು ಕೆಲವೊಂದು ಸ್ವಾರಸ್ಯಕರ ಘಟನೆಗಳಿಗೆ ಮತಗಟ್ಟೆಗಳು ಸಾಕ್ಷಿಯಾದವು.

ಬಿಜೆಪಿ ಅಭ್ಯರ್ಥಿಗೆ ಮತ ಹಾಕಿದ ವಿವಿ ಪ್ಯಾಟ್ ಮುದ್ರಣ ಮತದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಜೆಪಿ ಅಭ್ಯರ್ಥಿ ನಾರಾಯಣಗೌಡರಿಗೆ ಹಾಕಿರುವ ಮತದ ಪ್ರತಿ ವೈರಲ್ ಆಗಿದ್ದು, ಇದು ಕ್ಷೇತ್ರದ ಕರೋಟಿ ಗ್ರಾಮದ ಮತದಾರ ಹಾಕಿದ ಮತ ಎಂದು ಹೇಳಲಾಗಿದೆ. ಈ ಫೋಟೋವನ್ನು ವಾಟ್ಸಪ್ ಸ್ಟೇಟಸ್​​​ನಲ್ಲಿ ಅನಿಲ್ ಗೌಡ ಎಂಬ ಯುವಕ ಹಾಕಿಕೊಂಡಿದ್ದಾನೆ. ಈ ಬಗ್ಗೆ ಜೆಡಿಎಸ್ ವಲಯದಲ್ಲಿ ಚರ್ಚೆ ನಡೆಯುತ್ತಿದ್ದು, ದೂರು ಕೊಡುವ ಸಾಧ್ಯತೆ ಇದೆ.

ಸ್ಟೇಟಸ್​ನಲ್ಲಿ ವಿವಿ ಪ್ಯಾಟ್​ ಮುದ್ರಣ ಮತದ ಫೋಟೋ

ಮತದಾನಕ್ಕೆ ಶುಭಾಶಯ ಕೋರಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಹಾಕಿದ್ದಾರೆ. ಅಭಿವೃದ್ಧಿಗಾಗಿ ಉತ್ತಮ ಅಭ್ಯರ್ಥಿಗೆ ಮತ ಚಲಾಯಿಸಿ ಎಂದು ಮನವಿ ಮಾಡಿದ್ದಾರೆ. ಜಿಲ್ಲೆಯ ಮತದಾರರು ಸೂಕ್ಷ್ಮಮತಿಗಳು ಹಾಗೂ ಬುದ್ಧಿವಂತರು ಎಂಬುದನ್ನು ಕಳೆದ ಲೋಕಸಭಾ ಚುನಾವಣೆಯಲ್ಲಿ ತೋರಿಸಿಕೊಟ್ಟಿದ್ದಾರೆ. ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಸಂದೇಶದಲ್ಲಿ ಬರೆದುಕೊಂಡಿದ್ದಾರೆ. ಸುಮಲತಾ ಅವರ ಸಂದೇಶ ವೈರಲ್ ಆಗಿದ್ದು, ಪರೋಕ್ಷವಾಗಿ ಯಾರಿಗೆ ಬೆಂಬಲ ಕೊಟ್ಟಿದ್ದಾರೆ ಎಂಬ ಚರ್ಚೆಯೂ ನಡೆಯುತ್ತಿದೆ.

ಸಂಸದೆ ಸುಮಲತಾ ಅಂಬರೀಶ್​ ಫೇಸ್​ಬುಕ್​ ಪೋಸ್ಟ್​

ನೀತಿ ಸಂಹಿತೆ ಜಾರಿಯಾದ ನಂತರ ರಾಜಕೀಯ ಮುಖಂಡರು ಹಾಗೂ ಜನಪ್ರತಿನಿಧಿಗಳ ನಾಮಫಲಕ ಮತ್ತು ಭಾವಚಿತ್ರವನ್ನು ತೆರವುಗೊಳಿಸಲಾಗುತ್ತದೆ. ಆದರೆ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಬೂಕನಕೆರೆ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆ ಮೇಲೆ ಮುಖ್ಯಮಂತ್ರಿ ಯಡಿಯೂರಪ್ಪನವರ ಹೆಸರು ಹಾಗೂ ಅನುದಾನದ ವಿವರಣೆ ಇದ್ದರೂ ಅಧಿಕಾರಿಗಳು ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗಿಲ್ಲ ಎನ್ನಲಾಗಿದೆ. ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡ ನಿರ್ಮಾಣಕ್ಕೆ 2008ರಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ನೆರವು ನೀಡಿದ ಬೋರ್ಡನ್ನು ಹಾಗೆಯೇ ಬಿಡಲಾಗಿದೆ. ನಾಮಫಲಕ ಇರುವ ಕಟ್ಟಡದಲ್ಲಿ ಮತಗಟ್ಟೆಯನ್ನು ಸ್ಥಾಪನೆ ಮಾಡಲಾಗಿದೆ.

ಮತಗಟ್ಟೆಯಲ್ಲಿ ಯಡಿಯೂರಪ್ಪನವರು ಕೊಟ್ಟ ಅನುದಾನದ ಮಾಹಿತಿ ಫಲಕ

ಮದುವೆಗೂ ಮುನ್ನ ಮಧುಮಗ ಮತದಾನ ಮಾಡಿದ ಘಟನೆ ಕೆ.ಆರ್.ಪೇಟೆ ತಾಲೂಕಿನ ಚೌಡೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಮ್ಮೇನಹಳ್ಳಿಯ ಮುತ್ತುರಾಜ್, ಮದುವೆಗೂ ಮುನ್ನ ಮತ ಚಲಾಯಿಸಿ ಬಳಿಕ ಹಸೆಮಣೆ ಏರಿದ್ದಾರೆ. ತಾಳಿ ಕಟ್ಟಲು ಅರ್ಧ ಗಂಟೆ ಇರುವಾಗ ಬಂದು ಮತ ಚಲಾವಣೆ ಮಾಡಿ, ನಂತರ ತಾಳಿ ಕಟ್ಟಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ಉಡುಪಿನಲ್ಲೇ ಬಂದ ಮಧುಮಗನಿಗೆ ಮತಗಟ್ಟೆ ಬಳಿ ಗ್ರಾಮಸ್ಥರು ಶುಭಾಶಯ ಕೋರಿದ್ದಾರೆ.

ಮದುವೆ ವಸ್ತ್ರದಲ್ಲೇ ಮತಗಟ್ಟೆಗೆ ಬಂದ ಮಧುಮಗ

ABOUT THE AUTHOR

...view details