ಮಂಡ್ಯ : ಸಕ್ಕರೆ ನಗರಿ ಮಂಡ್ಯ ಜಿಲ್ಲೆಯಲ್ಲಿ ಪ್ರತಿಭಟನೆಗಳು ಮುಂದುವರೆದಿದೆ. ಜೀವನಾಡಿ ಕೆ.ಆರ್.ಎಸ್ ಜಲಾಶಯದಿಂದ ತಮಿಳುನಾಡಿಗೆ ನಿತ್ಯ ನೀರು ಹರಿಸುತ್ತಿರೋದು ಅನ್ನದಾತನ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನ ವಿರೋಧಿಸಿ ಜಿಲ್ಲಾದ್ಯಂತ ಕಾವೇರಿ ಕಿಚ್ಚು ಹೆಚ್ಚಾಗ್ತಾನೇ ಇದೆ. ಆದ್ರೆ ಸರ್ಕಾರ ಮಾತ್ರ ಮೌನ ವಹಿಸಿದ್ದು, ಸರ್ಕಾರದ ಕಣ್ಣು ತೆರೆಸಲು ವಿಭಿನ್ನ ರೀತಿಯಲ್ಲಿ ಹೋರಾಟಗಳನ್ನ ಮಾಡಲಾಗ್ತಿದೆ. ಇಷ್ಟಕ್ಕೂ ಬಗ್ಗದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ರೈತರು ನಿರ್ಧರಿಸಿದ್ದಾರೆ.
ಹೌದು ಕೆ. ಆರ್. ಎಸ್ನಿಂದ ತಮಿಳುನಾಡಿಗೆ ನಿತ್ಯ ನೀರು ಹರಿಸುತ್ತಿರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿನಿತ್ಯ ಹೋರಾಟ ಮಾಡ್ಕೊಂಡು ಬರ್ತಿರೋ ರೈತರ ಕೂಗು ಸರ್ಕಾರಕ್ಕೆ ಕೇಳಿಸ್ತಿಲ್ಲ. ಈವರೆಗೂ ವಿಭಿನ್ನ ರೀತಿಯಲ್ಲಿ ಹೋರಾಟ ಮಾಡ್ಕೊಂಡು ಬರಲಾಗ್ತಿದೆ. ಆದರೆ ಸರ್ಕಾರ ಮಾತ್ರ ಕ್ಯಾರೇ ಅಂತಿಲ್ಲ. ಇದ್ರಿಂದ ರೊಚ್ಚಿಗೆದ್ದಿರೋ ರೈತರು ಇದೇ 11 ರಂದು ಸಾವಿರಾರು ರೈತರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಿರೋದಾಗಿ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಮಂಡ್ಯದಲ್ಲಿ ಹಿತ ರಕ್ಷಣಾ ಸಮಿತಿ ಹೋರಾಟಕ್ಕೆ ಬೆಂಬಲ ಸೂಚಿಸಿದ ವಕೀಲರು, ಸಂಜಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದ್ರೆ, ಶ್ರೀರಂಗಪಟ್ಟಣದಲ್ಲಿ ವಕೀಲರು ಕಲಾಪ ಬಹಿಷ್ಕರಿಸಿ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಅತ್ತ ಭೂಮಿತಾಯಿ ಹೋರಾಟ ಸಮಿತಿ ವತಿಯಿಂದ ಒಣಗಿದ ಕಬ್ಬು ಹಿಡಿದು ವಿನೂತನವಾಗಿ ಪ್ರತಿಭಟಿಸಿದರಲ್ಲದೇ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.