ಮಂಡ್ಯ : ರಾಜ್ಯದಲ್ಲಿ ಜುಲೈನಲ್ಲಿ ಉತ್ತಮ ಮಳೆಯಾದ ಕಾರಣ ಎರಡು ತಿಂಗಳುಗಳ (ಜೂನ್ ಮತ್ತು ಜುಲೈ) ಅವಧಿಯಲ್ಲಿ ಸುಮಾರು 75 ಟಿಎಂಸಿ ಅಡಿಗಳಷ್ಟು ನೀರು ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹರಿದು ಹೋಗಿದೆ.
ಜೂನ್‌ನಲ್ಲಿ ನಿಗದಿತ ಸಮಯಕ್ಕೆ ಮಳೆ ಬಾರದ ಕಾರಣ ಈ ಬಾರಿ ರಾಜ್ಯ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇತ್ತು. ಆದರೆ, ಜುಲೈನಲ್ಲಿ ವಾಡಿಕೆಗಿಂತಲೂ ಅಧಿಕ ಮಳೆಯಾಗಿದ್ದರಿಂದ ತಮಿಳುನಾಡಿಗೆ ಹರಿಸಬೇಕಾದ ಪ್ರಮಾಣಕ್ಕಿಂತ ಹೆಚ್ಚಿನ ನೀರು ಹರಿದು ಹೋಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಜೂನ್ ಮತ್ತು ಜುಲೈ ನಲ್ಲಿ ತಮಿಳುನಾಡಿಗೆ 35 ಟಿಎಂಸಿ ಅಡಿಗಳಷ್ಟು ನೀರು ಬಿಡಬೇಕು.
ಜುಲೈನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರಿಂದ ಈ ಎರಡು ತಿಂಗಳಲ್ಲಿ 75 ಟಿಎಂಸಿ ಅಡಿಗಳಷ್ಟು ನೀರು ತಮಿಳುನಾಡಿಗೆ ಹರಿದು ಹೋಗಿದೆ. ಆಗಸ್ಟ್‌ನಲ್ಲಿ 50 ಟಿಎಂಸಿ ಅಡಿಯಷ್ಟು ನೀರು ಬಿಡಬೇಕು. ಒಂದು ವೇಳೆ ಆಗಸ್ಟ್‌ನಲ್ಲಿ ಮಳೆ ಕಡಿಮೆಯಾದರೂ ಜುಲೈನಲ್ಲಿ ಹೆಚ್ಚುವರಿ ನೀರು ಬಿಟ್ಟಿರುವುದರಿಂದ ಲೆಕ್ಕಾಚಾರ ಸರಿದೂಗಿಸಿದಂತಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.