ಆರ್ಯ-ಈಡಿಗ ಪೀಠದ ಪ್ರಣವಾನಂದ ಸ್ವಾಮೀಜಿ ಹಾಗೂ ಮಾಜಿ ಶಾಸಕ ಎಚ್.ಆರ್. ಶ್ರೀನಾಥ್ ಮಾತನಾಡಿದರು. ಗಂಗಾವತಿ (ಕೊಪ್ಪಳ):''ರಾಜ್ಯದ ಶೇ 90ರಷ್ಟು ಈಡಿಗ ಸಮಾಜ ಹಾಗೂ ಸಮುದಾಯದ ಪ್ರಮುಖರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಆದರೆ, ಇಂದು ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದವರಿಂದ ಈಡಿಗರು ಮೂಲೆಗುಂಪಾಗಿದ್ದಾರೆ'' ಎಂದು ಆರ್ಯ-ಈಡಿಗ ಪೀಠದ ಪ್ರಣವಾನಂದ ಸ್ವಾಮೀಜಿ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಆನೆಗೊಂದಿ ರಸ್ತೆಯಲ್ಲಿರುವ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ರಾಷ್ಟ್ರೀಯ ಆರ್ಯ-ಈಡಿಗ ಮಹಾಮಂಡಳಿಯ ಕೊಪ್ಪಳ ಜಿಲ್ಲಾ ಘಟಕ ಆಯೋಜಿಸಿದ್ದ ಹಿಂದುಳಿದ ಶೋಷಿತ ವರ್ಗಗಳ ಸಮಾವೇಶ ಉದ್ದೇಶಿಸಿ ಅವರು ಮಾತನಾಡಿದರು.
''ಈಡಿಗ ಮತ್ತು ಬಿಲ್ಲವ ಸಮಾಜದ ಶೇ 90ರಷ್ಟು ನಾಯಕರು ತಲೆತಲಾಂತರದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಬಂದಿದ್ದಾರೆ. ಆದರೆ, ಇತ್ತೀಚೆಗೆ ಪಕ್ಷಕ್ಕೆ ವಲಸೆ ಬಂದವರಿಂದ ನಮ್ಮವರು ಮೂಲೆಗುಂಪಾಗಿದ್ದಾರೆ. ಈ ಮೊದಲು ಬಿಲ್ಲವ-ಈಡಿಗ ಸಮಾಜಕ್ಕೆ ಹತ್ತರಿಂದ ಹನ್ನೊಂದು ಟಿಕೆಟ್ ಸಿಗ್ತಾ ಇತ್ತು. ಆದರೆ, ಕಲ್ಯಾಣ ಕರ್ನಾಟಕದಲ್ಲಿ, ಗಂಗಾವತಿಯಲ್ಲಿ ಒಂದು ಟಿಕೆಟ್ ನೀಡಲಾಗಿಲ್ಲ. ಅಲ್ಲದೇ ಬಿ.ಕೆ.ಹರಿಪ್ರಸಾದ್ರಂತಹ ದೊಡ್ಡನಾಯಕರನ್ನು ಮೂಲೆಗುಂಪು ಮಾಡುವಂತ ಹುನ್ನಾರ ಕಾಂಗ್ರೆಸ್ ಪಕ್ಷದಲ್ಲಿ ನಡೆದಿದೆ. ಈ ಮೊದಲು ನಮ್ಮ ಕುಲಕಸುಬು ಕಸಿದುಕೊಂಡರು, ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರು ನಮ್ಮ ಅಸ್ತಿತ್ವ ಮರೆ ಮಾಚುತ್ತಿದ್ದಾರೆ ಎಂದು ಕಿಡಿಕಾರಿದರು.
''ಸಮಾಜದ ಜಾಗೃತಿಗಾಗಿ ಸಮುದಾಯದ ಇತರೆ ಸಣ್ಣ ಸಮಾಜಗಳನ್ನು ಒಗ್ಗೂಡಿಸಿಕೊಂಡು ಶೋಷಿತರ ಪರವಾಗಿ ಧ್ವನಿ ಎತ್ತುವ ಉದ್ದೇಶಕ್ಕೆ ಸೆ.9ರಂದು ರಾಜ್ಯಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ 12 ಲಕ್ಷ ಜನ ಸೇರಿಸುವ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ'' ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಎಚ್.ಆರ್. ಶ್ರೀನಾಥ್ ಮಾತನಾಡಿ, ''ಎಲ್ಲಾ ಸಮಾಜದಲ್ಲಿಯೂ ಬಡತನವಿದೆ. ಈ ಬಡತನವನ್ನು ಗುರುತಿಸಿ ಮತ್ತು ಶೋಷಿತ ಸಮಾಜಗಳನ್ನು ಮುಖ್ಯ ವಾಹಿನಿಗೆ ತರುವ ಉದ್ದೇಶಕ್ಕೆ ಈ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕೇವಲ ಈಡಿಗ ಸಮಾಜ ಮಾತ್ರ ರಾಜಕೀಯವಾಗಿ ಮುಂದೆ ಬರುವ ಉದ್ದೇಶ ಹೊಂದಿಲ್ಲ. ಇಂದು ಸ್ವಾಮೀಜಿಗಳೇ ಇಲ್ಲದ ಸಾಕಷ್ಟು ಸಣ್ಣ ಸಮಾಜಗಳಿವೆ. ಸಣ್ಣ ಸಮಾಜಗಳಿಗೆ ಧ್ವನಿಯೇ ಇಲ್ಲ. ಅಂತಹ ಸಮಾಜಗಳನ್ನು ಜೊತೆಗೆ ಕರೆದೊಯ್ಯುವ ಉದ್ದೇಶಕ್ಕೆ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸೆ.9ರಂದು ಬೆಂಗಳೂರಿನಲ್ಲಿ ನಡೆಯುವ ಬೃಹತ್ ಹಿಂದುಳಿದ ಮತ್ತು ಶೋಷಿತ ಸಮಾಜದ ಸಮಾವೇಶಕ್ಕೆ ಕೊಪ್ಪಳ ಜಿಲ್ಲೆಯಿಂದ 25 ಸಾರಿಗೆ ವಾಹನಗಳನ್ನು ಏರ್ಪಾಡು ಮಾಡಲಾಗಿದೆ'' ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಮಾಜ ಸುಧಾರಕ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಕಲ್ಯಾಣ ಕರ್ನಾಟಕದ ನಾನಾ ಜಿಲ್ಲೆಗಳಿಂದ ಜನ ಆಗಮನಿಸಿದ್ದರು.
ಇದನ್ನೂ ಓದಿ:ದಾವಣಗೆರೆ: ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ