ಗಂಗಾವತಿ: ಇಂದು ಮೈಸೂರಿನಲ್ಲಿ ಆಚರಿಸುತ್ತಿರುವ ದಸರಾ ವಿಶ್ವ ವಿಖ್ಯಾತವಾಗಿರಬಹುದು. ಆದರೆ ದಸರಾ ಮಾತ್ರವಲ್ಲ, ಕನ್ನಡ ತಾಯಿ ಭುವನೇಶ್ವರಿಯ ಮೂಲ ಕೂಡ ಹಂಪಿಯಾಗಿದೆ ಎಂದು ಗಂಗಾವತಿ ಶಾಸಕ ಜಿ. ಜನಾರ್ದನ ರೆಡ್ಡಿ ಹೇಳಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕ, ಗಂಗಾವತಿ ತಾಲೂಕು ಘಟಕ ಹಾಗೂ ಸರ್ಕಾರಿ ನೌಕರರ ಸಂಘದಿಂದ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದರು. ಹಂಪಿಯ ವಿರೂಪಾಕ್ಷೇಶ್ವರನ ಸನ್ನಿಧಾನದಲ್ಲಿರುವ ಭುವನೇಶ್ವರಿಯೇ ಮೂಲ ಕನ್ನಡ ತಾಯಿ ಎಂದರು.
ದಸರಾ ಅಂದರೆ ಅದು ನಮ್ಮದು. ಶ್ರೀಕೃಷ್ಣ ದೇವರಾಯರ ಕಾಲದಲ್ಲಿ ಮಹಾನವಮಿ ದಿಬ್ಬದ ಸಮೀಪ 40 ಸಾವಿರ ಆನೆ, ಎರಡು ಲಕ್ಷ ಕುದುರೆಗಳು ಪ್ರದರ್ಶನದ ಮೂಲಕ ವಿಜಯನಗರದ ಸಾಮ್ರಾಜ್ಯದ ಶಕ್ತಿ ಏನೆಂಬುದನ್ನು ದಸರಾದಲ್ಲಿ ತೋರಿಸುತ್ತಿದ್ದರು. ಈ ಆನೆಗಳ ಮೇಲೆ ತಾಯಿ ಭುವನೇಶ್ವರಿ ದೇವಿಯನ್ನೂ ಕೂರಿಸಿಕೊಂಡು ಮೆರವಣಿಗೆ ಮಾಡಿ ದಸರಾ ಹಬ್ಬವನ್ನು ಮೊದಲಿಗೆ ಆಚರಿಸಿದ್ದು ಹಂಪಿಯಲ್ಲಿ. ವಿಜಯನಗರ ಸಾಮ್ರಾಜ್ಯ ಪತನವಾದ ಬಳಿಕವೇ ಅದು ಮೈಸೂರಿಗೆ ದಸರಾ ಉತ್ಸವ ಸ್ಥಳಾಂತರವಾಯಿತು ಎಂದರು.
ಹಂಪಿಯಂತೆ ಆನೆಗೊಂದಿ ಉತ್ಸವ:ಹಂಪಿ ಉತ್ಸವ ಹೇಗೆ ಸರ್ಕಾರ ಮಾಡುತ್ತದೆಯೋ ಅದೇ ಮಾದರಿಯಲ್ಲಿ ಆನೆಗೊಂದಿ ಉತ್ಸವ ಮಾಡೋಣ. ಸರ್ಕಾರ ಹಣ ಕೊಡಲಿ ಬಿಡಲಿ. ಸ್ಥಳೀಯವಾಗಿ ಸಂಪನ್ಮೂಲ ಕ್ರೋಢೀಕರಣ ಮಾಡಿ ಇಡೀ ರಾಜ್ಯ ಮತ್ತೆ ಆನೆಗೊಂದಿಯತ್ತ ನೋಡುವಂತೆ ಆನೆಗೊಂದಿ ಉತ್ಸವ ಆಚರಣೆ ಮಾಡೋಣ. ಈ ಭಾಗದ ಐತಿಹಾಸಿಕ ಸ್ಮಾರಕಗಳ ಪುನಃಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು. ಅವುಗಳನ್ನು ಆಕರ್ಷಣೀಯವಾಗಿ ಮಾಡಲು ಈ ಹಿಂದೆ ನಾನು ಹಂಪಿಯಲ್ಲಿ ಸೌಂಡ್ ಆ್ಯಂಡ್ ಲೈಟ್, ಹಂಪಿ ಬೈ ನೈಟ್ ಎಂಬ ಯೋಜನೆಗಳನ್ನು ಜಾರಿಗೆ ಮಾಡಲಾಗಿತ್ತು.
ನಾನು ಪ್ರವಾಸೋದ್ಯಮ ಸಚಿವನಾಗಿ ಹಾಗೂ ಹಂಪಿಯ ಬಗ್ಗೆ ಇದ್ದ ಪ್ರೀತಿಗೆ ಈ ಹಿಂದೆ ಕೇವಲ ನಲವತ್ತು ತಿಂಗಳಲ್ಲಿ 64 ಬಾರಿ ಹಂಪಿ - ಆನೆಗೊಂದಿಗೆ ಭೇಟಿ ನೀಡಿದ್ದೆ. ಅದೇ ಮಾದರಿಯ ಆನೆಗೊಂದಿ-ಗಂಗಾವತಿಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ಹಲವು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಗುಜರಾತ್ ಮೂಲದ ಒಂದು ಖಾಸಗಿ ಕಂಪನಿಗೆ ಮಾಸ್ಟರ್ ಪ್ಲ್ಯಾನ್ ಮಾಡಿ ಕೊಡಲು ಸೂಚನೆ ನೀಡಲಾಗಿದೆ ಎಂದರು.