ಗಂಗಾವತಿ: ಕನಕಗಿರಿ ವಿಧಾನಸಭಾ ಕ್ಷೇತ್ರದ ಹುಲಿಹೈದರ ಕೋಮು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಆತಂಕದ ವಾತವರಣ ಮುಂದುವರಿದಿದೆ. ಹುಲಿಹೈದರ ಗ್ರಾಮವನ್ನು ತೊರೆದ ಪುರುಷರು ಬೇರೆ ಗ್ರಾಮಗಳಿಗೆ ತೆರಳಿದ್ದಾರೆ. ಕಾರಣ ಈ ಗಲಭೆ ಕುರಿತು 58 ಜನರ ಮೇಲೆ ಎರಡು ಪ್ರಕರಣ ದಾಖಲಾಗಿದೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚುವರಿ ಯುವಕರನ್ನು ಬಂಧಿಸುವ ಸಾಧ್ಯತೆ ಹಿನ್ನೆಲೆ ಬಹುತೇಕರ ಪುರುಷರು ಗ್ರಾಮವನ್ನು ತೊರೆದಿದ್ದಾರೆ.
ಕಳೆದ ಒಂದು ವಾರದಿಂದ ಪುರುಷರಿಲ್ಲದೇ ಕುಟುಂಬ ನಿರ್ವಹಣೆ ಮತ್ತು ಮಕ್ಕಳ ಲಾಲನೆ - ಪಾಲನೆ, ದೈನಿಕ ಅಗತ್ಯ ವಸ್ತುಗಳ ಖರೀದಿಯಂತ ಕನಿಷ್ಠ ಕಾರ್ಯಕ್ಕೂ ಮಹಿಳೆಯರು ತೊಂದರೆ ಅನುಭವಿಸುತ್ತಿದ್ದಾರೆ. ಒಂದು ವಾರ ಕಳೆದರೂ ಗ್ರಾಮದಲ್ಲಿ ಪುರುಷರ ಓಡಾಟವಿಲ್ಲದಂತಾಗಿದ್ದು, ಮೌನ ಆವರಿಸಿದೆ. ಗ್ರಾಮಕ್ಕೆ ಭೇಟಿ ನೀಡುತ್ತಿರುವ ರಾಜಕಾರಣಿಗಳು ಮತ್ತು ಅವರ ಹಿಂಬಾಲಕರ ಓಡಾಟದಿಂದಾಗಿ ಆಗಾಗ ಗ್ರಾಮದಲ್ಲಿ ಕೊಂಚ ಸದ್ದಾಗುತ್ತಿರುವುದು ಬಿಟ್ಟರೆ ಬಹುತೇಕ ಮನೆಗಳ ಬಾಗಿಲು ಹಾಕಿದ ಸ್ಥಿತಿ ಕಂಡು ಬರುತ್ತಿದೆ.
ಹುಲಿಹೈದರ್ ಕೋಮು ಗಲಭೆ ಪ್ರಕರಣದ ಹಿನ್ನೆಲೆ: ಕನಕಗಿರಿ ವಿಧಾನಸಭಾ ಕ್ಷೇತ್ರದ ಹುಲಿಹೈದರ ಗ್ರಾಮದಲ್ಲಿ ಆಗಸ್ಟ್ 11ರಂದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಈ ಘಟನೆಯಲ್ಲಿ ಯಂಕಪ್ಪ (60 ವರ್ಷ), ಮತ್ತು ಬಾಷಾವಲಿ (22 ವರ್ಷ) ಸಾವೀಗೀಡಾಗಿದ್ದು, ಹಲವರು ಗಾಯಗೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ದೂರಿನನ್ವಯ ಇದುವರೆಗೆ 36 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ಗಲಭೆ ವೇಳೆ ಸಾವನ್ನಪ್ಪಿದ್ದ ಯಂಕಪ್ಪ ತಳವಾರ ಎಂಬುವವರ ಪತ್ನಿ ಹಂಪಮ್ಮ ನೀಡಿದ್ದ ದೂರಿನ ಆಧಾರದಲ್ಲಿ 30 ಮಂದಿಯ ವಿರುದ್ಧ ಹಾಗೂ ಇದೇ ಪ್ರಕರಣದಲ್ಲಿ ಸಾವನ್ನಪ್ಪಿದ್ದ ಪಾಷಾವಲಿ ಎಂಬುವವರ ಸಹೋದರ ಖಾದರಾಭಾಷಾ ಅವರು 28 ಜನರ ಮೇಲೆ ಪ್ರತ್ಯೇಕ ದೂರು ಸಲ್ಲಿಸಿದ್ದರು.