ಕರ್ನಾಟಕ

karnataka

ETV Bharat / state

ಹೆತ್ತವರ ಅಗಲಿಕೆಯ ನೋವಲ್ಲೂ NEET ಪರೀಕ್ಷೆಯಲ್ಲಿ ತೇರ್ಗಡೆ.. ಕುಷ್ಟಗಿಯ ವಿದ್ಯಾರ್ಥಿನಿಗೆ ಸನ್ಮಾನ - ನೀಟ್ ಪರೀಕ್ಷೆ

ಪರೀಕ್ಷೆಗೆ 3 ತಿಂಗಳ ಮೊದಲು ತನ್ನ ಹೆತ್ತವರನ್ನು ಕಳೆದುಕೊಂಡ ಕುಷ್ಟಗಿಯ ರೇಖಾ ಸಿದ್ದಪ್ಪ ಆಡೂರು ಈ ವರ್ಷದ NEET ಪರೀಕ್ಷೆಯಲ್ಲಿ 591 ಅಂಕಗಳೊಂದಿಗೆ 22,883ನೇ ರ‍್ಯಾಂಕ್ ಪಡೆದಿದ್ದಾರೆ.

Koppal
ರೇಖಾ ಆಡೂರು ಅವರಿಗೆ ಅಭಿನಂದಿಸುತ್ತಿರುವುದು..

By

Published : Nov 10, 2021, 12:35 PM IST

ಕುಷ್ಟಗಿ(ಕೊಪ್ಪಳ ):ಕಳೆದ 3 ತಿಂಗಳ ಹಿಂದೆ ತಂದೆ, ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ಕುಷ್ಟಗಿಯ ರೇಖಾ ಸಿದ್ದಪ್ಪ ಆಡೂರು ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ)ಯಲ್ಲಿ 591 ಅಂಕ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಹೆತ್ತವರ ಅಗಲಿಕೆಯ ನೋವಲ್ಲೂ ಸಾಧನೆ ಮಾಡಿದ ಈ ವಿದ್ಯಾರ್ಥಿನಿ ಕುರಿತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕುಷ್ಟಗಿಯ 16ನೇ ವಾರ್ಡ್ ನಿವಾಸಿ ಸಿದ್ದಪ್ಪ ಆಡೂರು ಹಾಗು ರಾಜೇಶ್ವರಿ ದಂಪತಿಯ ದ್ವಿತೀಯ ಪುತ್ರಿ ರೇಖಾ ಆಡೂರು. ತಂದೆ ಸಿದ್ದಪ್ಪ ಆಡೂರು ಕೆ.ಬೋದೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕ‌ರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ರಾಜೇಶ್ವರಿ ಆಡೂರು ಕುಷ್ಟಗಿ ಪುರಸಭೆ ಉಪಾಧ್ಯಕ್ಷರಾಗಿದ್ದರು.

ಕಳೆದ ಏ.22ರಂದು ರಾಜೇಶ್ವರಿ ಆಡೂರು ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದರು. ಸದರಿ ಕುಟುಂಬ ಈ‌ ಆಘಾತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ತಂದೆ ಸಿದ್ದಪ್ಪ ಆಡೂರು ಕಳೆದ ಜು.30 ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದರು.

ಬೀದರ್​​ನ​ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರೇಖಾ ಆಡೂರು ಅವರಿಗೆ ಹೆತ್ತವರ ಅಗಲಿಕೆಯಿಂದ ಮಾನಸಿಕವಾಗಿ ಘಾಸಿಯಾಗಿದ್ದರೂ ಎದೆಗುಂದದೆ ನೀಟ್ ಪರೀಕ್ಷೆ ಬರೆದಿದ್ದರು. ನೀಟ್ ಪರೀಕ್ಷೆಯ 2ನೇ ಪ್ರಯತ್ನದಲ್ಲಿ 591 ಅಂಕಗಳ‌ ಸಾಧನೆಯೊಂದಿಗೆ ರೇಖಾ 22,883ನೇ ರ‍್ಯಾಂಕ್ ಪಡೆದಿದ್ದಾರೆ.

ಬೀದರ್​​ನ ಶಾಹೀನ್ ಶಿಕ್ಷಣ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಅಬ್ದುಲ್ ಖದೀರ್ ಅವರು, ಈ ವಿದ್ಯಾರ್ಥಿಯ ಮುಂದಿನ ವಿದ್ಯಾಭ್ಯಾಸದ ನೆರವಿಗೆ ಬಂದಿದ್ದಾರೆ. 60 ಸಾವಿರ ರೂ. ಚೆಕ್​​ ನೀಡುವ ಮೂಲಕ ಸನ್ಮಾನಿಸಿ ರೇಖಾ ಅವರಿಗೆ ಬೆಂಗಾವಲಾಗಿ ನಿಂತಿದ್ದಾರೆ. ನನಗೆ 22,883ನೇ ರ‍್ಯಾಂಕ್ ಬಂದಿರುವುದಕ್ಕೆ ಶಾಹೀನ್ ಶಿಕ್ಷಣ ಸಂಸ್ಥೆ ನನ್ನ ಮೇಲೆಯಿಟ್ಟ ನಂಬಿಕೆ ಹಾಗು ನನ್ನ ಆತ್ಮಸ್ಥೈರ್ಯವೇ ಕಾರಣ. ಜೀವನದ ಕಠಿಣ ಸಮಯದಲ್ಲಿ ನನಗೆ ಬೆಂಬಲ ನೀಡಿದರು. ನಮ್ಮ ತಂದೆ ಹಾಗು ಅಜ್ಜಿ ಹೃದಯಘಾತದಿಂದ‌ ಮೃತಪಟ್ಟಿದ್ದಾರೆ. ತಾಯಿ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ನೋವು ಇನ್ನೂ ಇದೆ. ಈ ನೋವು ನಿವಾರಣೆಗೆ ಮುಂದೆ ಹೃದ್ರೋಗ ತಜ್ಞೆಯಾಗುವ ಮಹತ್ವಾಕಾಂಕ್ಷೆ ಹೊಂದಿರುವುದಾಗಿ ರೇಖಾ ತಿಳಿಸಿದ್ದಾರೆ.

ಈ ವಿದ್ಯಾರ್ಥಿನಿಯ ಸಾಧನೆಗೆ ಸ್ಥಳೀಯ ಹೈದರಾಬಾದ್ ಕರ್ನಾಟಕ ಯುವ ಶಕ್ತಿ ಸಂಘಟನೆಯ ಬಸವರಾಜ್ ಗಾಣಗೇರ, ರೈತ ಸಂಘಟನೆಯ ನಜೀರಸಾಬ್ ಮೂಲಿಮನಿ, ಶಂಕರಗೌಡ ಪಾಟೀಲ, ಕಿರಣ್ ಜ್ಯೋತಿ ಅಭಿನಂದಿಸಿ ಸನ್ಮಾನಿಸಿದರು.

ABOUT THE AUTHOR

...view details