ಕೊಪ್ಪಳ: ಬಿಜೆಪಿ ನೇತೃತ್ವದ ಅನೈತಿಕ ಸರ್ಕಾರ ರಾಜ್ಯದಲ್ಲಿದೆ. ಮುಂಬರುವ ಚುನಾವಣೆಯಲ್ಲಿ ಈ ಭ್ರಷ್ಟ ಸರ್ಕಾರ ತೊಲಗಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಯಲಬುರ್ಗಾ ಕಾಂಗ್ರೆಸ್ ಕಚೇರಿಯಲ್ಲಿ ಕೃಷ್ಣಾ ಬಿ. ಸ್ಕೀಂ ಕುರಿತ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಬಿಜೆಪಿಗರು ಕಾಂಗ್ರೆಸ್ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರುವ ದೋಣಿ ಎಂದೆಲ್ಲ ಮಾತನಾಡುತ್ತಿರುವ ಅವರಿಗೆ ಯಾವುದೇ ನೈತಿಕತೆ ಇಲ್ಲ. ಜನ ಬಹುಮತ ಕೊಡದೇ ಇದ್ದರು, ನಮ್ಮ ಪಕ್ಷದ ಶಾಸಕರಿಗೆ ಇಲ್ಲ ಸಲ್ಲದ ಆಸೆ ತೋರಿಸಿ ಸೆಳೆದು ಸರಕಾರ ರಚಿಸಿದರು. ಹೀಗೆ ಗೋವಾ, ಮಧ್ಯಪ್ರದೇಶ ಮುಂತಾದ ಕಡೆ ಇದೇ ಅನಾಚಾರ ಮಾಡಿ ಬಿಜೆಪಿ ಸರ್ಕಾರ ರಚಿಸಿದೆ ಎಂದರು.
ಭ್ರಷ್ಟಾಚಾರ: ಎಲ್ಲ ಕಾಲದಲ್ಲೂ ಭ್ರಷ್ಟಾಚಾರ ಆಗಿದೆ. ಆದರೆ, ಅದಕ್ಕೊಂದು ಇತಿ ಮಿತಿ ಇತ್ತು. ಆದರೆ, ಈಗ ಅದು ಅತೀ ಮೀತಿಮೀರಿದೆ. ರಾಜ್ಯ ಸರ್ಕಾರ ಭ್ರಷ್ಟಾಚಾರವನ್ನ ಪ್ರೋತ್ಸಾಹಿಸುತ್ತಿದೆ. ಗುತ್ತುಗೆದಾರರು ಮಾಡಿದ ಶೇ 40ರಷ್ಟು ಲಂಚ ಆರೋಪವನ್ನ ತನಿಖೆ ಮಾಡಲಿಲ್ಲ. ಪ್ರಧಾನಮಂತ್ರಿ ಅವರಿಗೂ ಈ ಕುರಿತು ಪತ್ರ ಬರೆದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಅಂದರೆ ಇವರಿಗೆ ನೈತಿಕತೆ ಇಲ್ಲ ಎಂದು ಹರಿಹಾಯ್ದರು.
ಬೆಲೆ ಏರಿಕೆ: ದಿನಬಳಕೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿದೆ. ರೂಪಾಯಿ ಮೌಲ್ಯ ಕುಸಿದಿದೆ. ಪ್ರಧಾನಿ ನರೇಂದ್ರ ಮೋದಿ ಸತ್ಯ ಮಾತನಾಡುತ್ತಿಲ್ಲ. ದೇಶದ ಜನರನ್ನ ಸುಳ್ಳು ಹೇಳಿ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಜನರಿಗೆ ಪ್ರಧಾನಿಯವರು ಸುಳ್ಳುಗಳು ಒಂದೊಂದಾಗಿ ತಿಳಿಯುತ್ತಿವೆ. ಮುಂಬರುವ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ.