ಕೊಪ್ಪಳ: ಕೂಪಳಘಡ ಬಹದ್ದೂರಕೋ ಬಂಡಾ, ಸತ್ತಾಯಿಸ ಬಾಯಿರೋ ಏಕಜಝಂಡಾ, ಆವೋರೋ ಭಾಯಿಯೋ ಹೋಳಿಜರಮ್ಮ, ಲಂಬಾಣಿ ಭಾಷೆಯ ಈ ಹಾಡು ಲಂಬಾಣಿಗರ ಪವಿತ್ರ ಸ್ಥಳವೊಂದರಲ್ಲಿ ಹೋಳಿ ಆಚರಣೆ ಬಗ್ಗೆ ಬಣ್ಣಿಸುತ್ತದೆ.
ಕೊಪ್ಪಳ ಜಿಲ್ಲೆಯ ಬಹದ್ದೂರಬಂಡಿ ಮೇಲಿನ ಈ ಹಾಡಿನ ಸಾಲುಗಳ ಅರ್ಥವೇನೆಂದರೆ ಕೊಪ್ಪಳ ಬಳಿಯ ಬಹದ್ದೂರಬಂಡಿ ನಮ್ಮ ಬಂಜಾರರ ಮೂಲನೆಲೆಯಾಗಿದೆ. ಈ ಪವಿತ್ರ ಮೂಲನೆಲೆಗೆ ಬಂಜಾರ ಸಮುದಾಯದ ಎಲ್ಲ ಬಾಂಧವರು ಬನ್ನಿ, ಎಲ್ಲರೂ ಸೇರಿ ಹೋಳಿ ಆಚರಿಸೋಣ ಎಂಬುದಾಗಿದೆ.
ಬಂಜಾರ ಸಮುದಾಯದ ಪವಿತ್ರ ಸ್ಥಳಗಳಲ್ಲಿ ಕೊಪ್ಪಳ ತಾಲೂಕಿನ ಬಹದ್ದೂರಬಂಡಿ ಗ್ರಾಮದ ಬಳಿ ಇರುವ ಹಾತಿರಾಮ್ ಬಾವಾಜಿ ಕಟ್ಟೆಯೂ ಒಂದು. ಇದನ್ನು ಬಂಜಾರರ ಮೂಲನೆಲೆ ಎಂದು ಹೇಳಲಾಗಿದೆ.
ಹಿಂದಿನ ಕಾಲದಲ್ಲಿ ಅಲೆಮಾರಿಗಳಾಗಿದ್ದ ಲಂಬಾಣಿ ಸಮುದಾಯದ ಬಹದ್ದೂರಬಂಡಿ ಬಳಿಯ ಹಾತಿರಾಮ್ ಬಾವಾಜಿ ಕಟ್ಟೆಯ ಸ್ಥಳದಲ್ಲಿ ವರ್ಷಕ್ಕೊಮ್ಮೆ ಸೇರುತ್ತಿದ್ದರು. ಎಲ್ಲರೂ ಸೇರಿ ಹೋಳಿ ಹಬ್ಬ ಆಚರಿಸಿದ ಬಳಿಕ ದೇಶಾದ್ಯಂತ ವಲಸೆ ಹೋಗುತ್ತಿದ್ದರು. ಮತ್ತೆ ಇವರೆಲ್ಲರೂ ಸೇರುತ್ತಿದ್ದದ್ದು ಮುಂದಿನ ಹೋಳಿ ಹಬ್ಬಕ್ಕೆ.
ಹೀಗಾಗಿ, ಹಿಂದಿನ ಕಾಲದಲ್ಲಿ ಬಂಜಾರ ಸಮುದಾಯಕ್ಕೆ ಹಾತಿರಾಮ್ ಬಾವಜಿ ಕಟ್ಟೆಯು ಸಮುದಾಯದ ಜನರು ಸಂಧಿಸುವ ಸ್ಥಳವಾಗಿತ್ತು. ಸತ್ಪುರುಷ ಹಾತಿರಾಮ್ ಬಾವಾಜಿ ಕಟ್ಟೆಯ ಈ ಸ್ಥಳ ಬಂಜಾರರಿಗೆ ಪವಿತ್ರ ನೆಲವಾಗಿದೆ. ಇತಿಹಾಸ ಮರುಕಳಿಸುವಂತೆ ಸುಮಾರು ವರ್ಷಗಳಿಂದ ರಾಷ್ಟ್ರೀಯ ಹೋಳಿ ಹಬ್ಬ ಆಚರಣೆ ಮಾಡಲಾಗುತ್ತದೆ.
ಈ ವರ್ಷ ಕೊರೊನಾ ಹಿನ್ನೆಲೆ ಸರಳವಾಗಿ ಆಚರಿಸಲಾಗುತ್ತಿದೆ. ಸರ್ಕಾರ ನೀಡಿರುವ ಸುಮಾರು 7.5 ಕೋಟಿ ರುಪಾಯಿ ಅನುದಾನ ಬಳಸಿಕೊಂಡು ಅಭಿವೃದ್ಧಿ ಕಾರ್ಯ ನಡೆಸಲಾಗುತ್ತಿದೆ. ಹಾತಿರಾಮ್ ಬಾವಾಜಿ ಕಟ್ಟೆ ಇರುವ ಸ್ಥಳ ಸೇರಿ ಸುಮಾರು 14 ಎಕರೆ ಭೂಮಿಯನ್ನು ಖರೀದಿಸಲಾಗಿದೆ.
ಹಾತಿರಾಮ್ ಬಾವಾಜಿ ಕಟ್ಟೆಯ ಅಭಿವೃದ್ದಿ, ಯಾತ್ರಾ ನಿವಾಸ, ಸಮುದಾಯ ಭವನ ನಿರ್ಮಾಣ ಮಾಡಲಾಗಿದೆ. ಇನ್ನೂ ಸಹ ಅಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಬೇಕಿದ್ದು, ಅದನ್ನು ಯಾತ್ರಾ ಸ್ಥಳವನ್ನಾಗಿ ರೂಪಿಸಲಾಗುತ್ತಿದೆ.