ಕೋಲಾರ: ಜಿಲ್ಲೆಯ ಜನರ ಬಹು ನಿರೀಕ್ಷಿತ ಯೋಜನೆ, ಸುಮಾರು ಒಂದು ದಶಕದ ಕನಸಿನ ಕೂಸು, ಶುದ್ಧ ಕುಡಿಯುವ ನೀರಿಗಾಗಿಯೇ ಆರಂಭಿಸಿದ ಯೋಜನೆ ಯರಗೋಳ್ ಅಣೆಕಟ್ಟು ಬರುವ ಜನವರಿ ತಿಂಗಳಲ್ಲಿ ಲೋಕಾರ್ಪಣೆಯಾಗುವ ಮೂಲಕ ಜನರ ಕನಸು ನನಸಾಗಲಿದೆ.
ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಯರಗೋಳ್ ಗ್ರಾಮದಲ್ಲಿ ಬೃಹದಾಕಾರವಾಗಿ ತಲೆ ಎತ್ತಿರುವ ನೀರಾವರಿ ಅಣೆಕಟ್ಟು. ಕೋಲಾರ ಸೇರಿದಂತೆ ಮೂರು ತಾಲೂಕುಗಳಿಗೆ ಕುಡಿಯುವ ನೀರು ಒದಗಿಸಲು 2008ರಲ್ಲಿ ಯರಗೋಳ್ ಯೋಜನೆ ಆರಂಭವಾಯಿತು. ಅದು ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಪಟ್ಟಣಗಳಿಗೆ ಹಾಗೂ 45 ಇನ್ನಿತರ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಂದಿನ ಮುಖ್ಯಮಂತ್ರಿ ಧರಂಸಿಂಗ್ ಸರ್ಕಾರದಿಂದ 240 ಕೋಟಿ ವೆಚ್ಚದ ಡ್ಯಾಂ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರಕಿತ್ತು. ನಂತರ 2010ರಿಂದ ಕಾಮಗಾರಿ ನಡೆದು ಸುದೀರ್ಘವಾದ ಸಮಯ ತೆಗೆದುಕೊಂಡು ಈಗ ಮುಕ್ತಾಯದ ಹಂತಕ್ಕೆ ಬಂದಿದೆ.
ಯರಗೋಳ್ ಅಣೆಕಟ್ಟು ಯೋಜನೆ ಜನವರಿ ತಿಂಗಳಲ್ಲಿ ಲೋಕಾರ್ಪಣೆ ಸುಮಾರು 240 ಕೋಟಿ ರೂ. ಭಾರೀ ವೆಚ್ಚದಲ್ಲಿ ಇಲ್ಲಿ ಡ್ಯಾಂ ನಿರ್ಮಾಣ ಮಾಡಿದರೂ ಸಹ ನೀರು ನಮಗೆ ಲಭ್ಯವಾಗಬಹುದೇ ಎಂಬ ಜಿಜ್ನಾಸೆ ಈಗಲೂ ಕಾಡುತ್ತಿರುವುದು ಉಂಟು. ಏಕೆಂದರೆ ಜಿಲ್ಲೆಯಲ್ಲಿ ಮಳೆ ವಾಡಿಕೆಯಂತೆ ಸುರಿಯುವುದಿಲ್ಲ. ಇದು ಕಳೆದ ಎರಡು ದಶಕಗಳಿಂದ ಸಾಬೀತು ಆಗಿದೆ. ಆದರೂ ಸಹ ಛಲ ಬಿಡದೆ ಇಲ್ಲಿ ಅಣೆಕಟ್ಟು ನಿರ್ಮಾಣವೇನೋ ಈಗ ಸಂಪೂರ್ಣವಾಗಿದೆ.
ಶೇ. 90ರಷ್ಟು ನಿರ್ಮಾಣ ಕಾಮಗಾರಿ ಮುಗಿದಿದ್ದು, ಜನವರಿ ತಿಂಗಳಲ್ಲಿ ಲೋಕಾರ್ಪಣೆಯಾಗಲಿದೆ. ಆದ್ರೆ ಕೂಸು ಹುಟ್ಟುವುದಕ್ಕೆ ಮುನ್ನ ಕುಲಾಯಿ ಹೊಲಿಸಿದರು ಎಂಬ ಗಾದೆಯಂತೆ ಅಣೆಕಟ್ಟು ಬಳಿಯಿಂದ ಪೈಪ್ಲೈನ್ ಹಾಕಿಯೇ 8 ವರ್ಷಗಳು ಕಳೆದಿವೆ. ಆದ್ರೆ ಈಗ ಡ್ಯಾಂ ನಿರ್ಮಾಣ ಕಾರ್ಯ ಬಹುತೇಕ ಮುಕ್ತಾಯ ಹಂತಕ್ಕೆ ಬಂದಿದೆ. ಸದ್ಯ ಕಾಮಗಾರಿಯಲ್ಲಿ ವಿದ್ಯುತ್ ವೈರಿಂಗ್ ಮತ್ತು ಮೋಟಾರ್ಗಳ ಅಳವಡಿಕೆ ಒಂದೇ ಬಾಕಿ ಇದೆ. ಉತ್ತಮ ಮಳೆ ಬಂದು ಇಲ್ಲಿ ನೀರು ಸಂಗ್ರಹವಾದರೆ ಅರ್ಧ ಟಿಎಂಸಿ ನೀರು ಸಂಗ್ರಹವಾಗಲಿದೆ ಎಂಬುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ. ಅದೇನೇ ಇರಲಿ ಡ್ಯಾಂ ನಿರ್ಮಾಣ ಸಂಪೂರ್ಣವಾಗಿರೋದು ಈಗ ಕೋಲಾರದ ಜನತೆಯ ಸಂತಸಕ್ಕೆ ಕಾರಣವಾಗಿದೆ.
ಹಲವು ದಶಕಗಳಿಂದ ಬರಪೀಡಿತ ಜಿಲ್ಲೆಯಾಗಿರುವ ಜಿಲ್ಲೆಗೆ ಸದ್ಯ ಎತ್ತಿನಹೊಳೆಯಿಂದಲೂ ಸಹ ನೀರು ಬರುತ್ತಿದ್ದು, ಇದರ ಜೊತೆಗೆ ಯರ್ಗೋಳ್ ಡ್ಯಾಂನಿಂದಲೂ ನೀರು ಹರಿದು ಬರುವುದರಿಂದ ಜಿಲ್ಲೆಯ ಜನತೆಗೆ ಎಲ್ಲಿಲ್ಲದ ಸಂತಸ ತಂದಿದೆ.