ಕೋಲಾರ :ಏಪ್ರಿಲ್ 10 ರಂದು ಕೋಲಾರಕ್ಕೆ ರಾಹುಲ್ ಗಾಂಧಿ ಅವರು ಆಗಮಿಸುತ್ತಿರುವ ಹಿನ್ನೆಲೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರ ನೇತೃತ್ವದಲ್ಲಿ ದೆಹಲಿಯ ತಂಡ ಕೋಲಾರಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಲೀಂ ಅಹ್ಮದ್ ಅವರು, ಏಪ್ರಿಲ್ 10 ರಂದು ಕೋಲಾರದಲ್ಲಿ ಜೈ ಭಾರತ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ, ರಾಜಸ್ಥಾನ, ಛತ್ತೀಸ್ಘಡ್ ಹಾಗೂ ಹಿಮಾಚಲ ಪ್ರದೇಶದ ಸಿಎಂಗಳು ಭಾಗವಹಿಸಲಿದ್ದಾರೆ ಎಂದರು.
ಬಿಜೆಪಿ ಹುನ್ನಾರಕ್ಕೆ ರಾಹುಲ್ ಗಾಂಧಿ ಹೆದರುವುದಿಲ್ಲ- ಸಲೀಂ ಅಹ್ಮದ್.. ಈ ಕಾರ್ಯಕ್ರಮ ಐತಿಹಾಸಿಕ ಕಾರ್ಯಕ್ರಮವಾಗಲಿದ್ದು, ರಾಹುಲ್ ಗಾಂಧಿ ಅವರ ವಿರುದ್ದ ಬಿಜೆಪಿ ಅವರು ಮಾಡಿರುವ ಷಡ್ಯಂತ್ರದ ಕುರಿತು ಮಾತನಾಡಲಿದ್ದಾರೆ. ಇನ್ನು ಬಿಜೆಪಿಯವರ ಹುನ್ನಾರಕ್ಕೆ ರಾಹುಲ್ ಗಾಂಧಿ ಹೆದರುವುದಿಲ್ಲ, ಕೋಟ್ಯಾಂತರ ಜನರ ಆಶೀರ್ವಾದ ಅವರ ಮೇಲೆ ಇದೆ. ಇದರೊಂದಿಗೆ ಅವರ ಜೊತೆ ಕಾಂಗ್ರೆಸ್ ಪಕ್ಷ ಇದೆ ಎಂದು ಸಲೀಂ ಅಹ್ಮದ್ ಹೇಳಿದರು.
ರೌಡಿಗಳಿಗೆ ಮಣೆ ಹಾಕಲು ಬಿಜೆಪಿ ಹೊರಟಿದೆ- ಸಲೀಂ ಅಹ್ಮದ್ :ಅಲ್ಲದೆ ರಾಜ್ಯದಲ್ಲಿ ಚುನಾವಣೆಯ ಕುರಿತು ವಾಹಿನಿಗಳಲ್ಲಿ ಸಮೀಕ್ಷೆ ಹೊರ ಬಿದಿದ್ದೆ. ಈ ಹಿನ್ನಲೆ ಬಿಜೆಪಿಯವರು ಸೋಲುವ ಭೀತಿಯಲ್ಲಿ ಭ್ರಮನಿರಸನಗೊಂಡಿದ್ದು, ಇದರಿಂದ ರಾಜ್ಯಕ್ಕೆ ರಾಹುಲ್ ಗಾಂಧಿ ಬರುವುದನ್ನು ತಡೆಯುತ್ತಿದೆ. ಇನ್ನು ಬಿಜೆಪಿಯಲ್ಲಿ ರೌಡಿಗಳು, ದಲ್ಲಾಳಿಗಳು ಹಾಗೂ ಭ್ರಷ್ಟಾಚಾರಿಗಳಿರುವಂತಹ ಸರ್ಕಾರ, ಮೋದಿ ಅವರೇ ಫೈಟರ್ ರವಿ ಅಂತಹ ರೌಡಿಗೆ ಕೈ ಮುಗಿಯುತ್ತಾರೆ. ಚುನಾವಣೆಯಲ್ಲಿ ರೌಡಿಗಳಿಗೆ ಮಣೆ ಹಾಕಲು ಬಿಜೆಪಿ ಹೊರಟಿದೆ ಎಂದು ಬಿಜೆಪಿ ವಿರುದ್ಧ ಸಲೀಂ ಅಹ್ಮದ್ ಕಿಡಿಕಾರಿದರು.