ಕೋಲಾರ: ಇಡೀ ಪ್ರಪಂಚದಲ್ಲಿಯೇ ಶೇರ್(ಸಿಂಹ) ಎಂದು ಕರೆಯುತ್ತಿರುವಂತಹ ನಮ್ಮ ನರೇಂದ್ರ ಮೋದಿ ಅವರನ್ನು ಇವತ್ತು ಕಾಂಗ್ರೆಸ್ ಅವನತಿಗೆ ಕಾರಣರಾದ ರಾಹುಲ್ ಗಾಂಧಿ ಶೇರ್ ಅನ್ನು ಚೋರ್ ಎಂದು ಕರೆದಿದ್ದರು. ಇದಕ್ಕೆ ಗುಜರಾತ್ ನ್ಯಾಯಾಲಯ ತಕ್ಕ ಉತ್ತರ ನೀಡಿದೆ ಎಂದು ಕೋಲಾರದಲ್ಲಿ ಸಂಸದ ಎಸ್ ಮುನಿಸ್ವಾಮಿ ಅವರು ಹೇಳಿದ್ದಾರೆ.
ಪೂರ್ಣೇಶ್ ಮೋದಿ ಅವರಿಗೆ ಅಭಿನಂದನೆ- ಮುನಿಸ್ವಾಮಿ: ಇಂದು ಗುಜರಾತ್ ನ್ಯಾಯಾಲಯ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿರುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 2019 ಲೋಕಸಭೆ ಚುನಾವಣೆಗೆ ಕೆಜಿಎಫ್ಗೆ ಚುನಾವಣಾ ಪ್ರಚಾರಕ್ಕೆ ಬಂದಂತಹ ಸಂದರ್ಭದಲ್ಲಿ ಯಾರೋ ಪಕ್ಕದಲ್ಲಿದ್ದವರು ಹೇಳಿಕೊಟ್ಟಿರುತ್ತಾರೆ, ಅದನ್ನು ರಾಹುಲ್ ಗಾಂಧಿ ಹಾಗೆಯೇ ಹೇಳಿದ್ದರು. ಚೋಕಿದಾರ್ ನಹೀ ಚೋರ್ ಹೈ ಎಂದು ಹೇಳಿದ್ದರು. ಅದಕ್ಕಾಗಿ ನಮ್ಮ ಬಿಜೆಪಿ ಶಾಸಕ ಪೂರ್ಣೇಶ್ ಅವರು ಸೂರತ್ ಜಿಲ್ಲಾ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದೀಗ ನ್ಯಾಯಾಲಯ ಅವರಿಗೆ 2 ವರ್ಷ ಶಿಕ್ಷೆ ವಿಧಿಸಿದೆ. ಹೀಗಾಗಿ ನಾನು ಭಾರತೀಯ ಜನತೆ ಪರವಾಗಿ ಹಾಗೂ ಮೋದಿ ಅಭಿಮಾನಿಗಳ ಪರವಾಗಿ ಪೂರ್ಣೇಶ್ ಮೋದಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.
ಸಾಮಾನ್ಯ ಜ್ಞಾನವೂ ರಾಹುಲ್ ಗಾಂಧಿಗೆ ಇಲ್ಲ- ಮುನಿಸ್ವಾಮಿ : ಇವತ್ತು ವಿಶ್ವ ನಾಯಕರಾಗಿರುವ ನರೇಂದ್ರ ಮೋದಿಯವರ ಬಗ್ಗೆ ಯಾವ ರೀತಿ ಮಾತನಾಡಬೇಕು, ವಿರೋಧ ಪಕ್ಷದವರಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಲೆಕ್ಕಾಚಾರದಲ್ಲಿ ಸಾಮಾನ್ಯ ಜ್ಞಾನವೂ ರಾಹುಲ್ ಗಾಂಧಿ ಅವರಿಗಿಲ್ಲ. ವಿದೇಶಗಳಿಗೆ ಹೋಗಿ ಅಲ್ಲಿ ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಆಗಿದೆ ಎಂಬ ಹೇಳಿಕೆ ನೀಡುವ ಇವರಿಗೆ ರಾಜಕಾರಣದಲ್ಲಿ ಉಳಿಯುವ ಯೋಗ್ಯತೆ ಇಲ್ಲ. ಕಾಂಗ್ರೆಸ್ ಪಕ್ಷ ರಾಜ್ಯ ಹಾಗೂ ದೇಶದಲ್ಲಿ ಅವನತಿ ಮಟ್ಟಕ್ಕೆ ತಲುಪಿದೆ ಎಂದು ಸಂಸದ ಮುನಿಸ್ವಾಮಿ ಟೀಕಿಸಿದರು.
ಮೋದಿಯ ಬಗ್ಗೆ ಮಾತನಾಡುವಾಗ ನೂರು ಸಲ ಯೋಚಿಸಲಿ: ಇವತ್ತು ಅವರು ಎಲ್ಲಿಗೆ ಹೋದರೂ ಪೊಲೀಸರು ಹಾಗೂ ಇಡಿ ಕಾಟ ತಡೆಯಲು ಸಾಧ್ಯವಾಗುತ್ತಿಲ್ಲ. ಅವರು ಬಾಯಿಗೆ ಏನು ಬರುತ್ತೋ ಅದನ್ನೆಲ್ಲ ಮಾತನಾಡುತ್ತಾರೆ. ಪಕ್ಕದಲ್ಲಿ ಅವರಿಗೆ ಏನು ಹೇಳಿ ಕೊಡುವವರಿರುತ್ತಾರೆ, ಅವರು ಸಹ ಅಂತಹ ಮೇಧಾವಿಗಳಲ್ಲ. ಇವರು ಹೊಗಳಿಕೆ ಭಟ್ಟರನ್ನು ಇಟ್ಟುಕೊಂಡಿರುವುದರಿಂದ ಇಂತಹ ಅವಘಡಗಳೆಲ್ಲ ಆಗುತ್ತಿದೆ. ಇದನ್ನೆಲ್ಲಾ ನೋಡಿದ ಮೇಲೆ ನಮ್ಮ ಶೇರ್ ನರೇಂದ್ರ ಮೋದಿಯ ಬಗ್ಗೆ ನೂರು ಸಲ ಯೋಚಿಸಿ ಮಾತನಾಡಬೇಕು ಎಂದು ಸಂಸದರು ಎಚ್ಚರಿಕೆ ನೀಡಿದರು.