ಕೋಲಾರ: ಆ.26ರಂದು ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಾರೆ ಅಂದ್ರೆ, ಅವರೇ ಉದ್ದೇಶ ಪೂರ್ವಕವಾಗಿ ಕಾರಿನ ಮೇಲೆ ಮೊಟ್ಟೆ ಒಡೆಸಿಕೊಂಡಿದ್ದಾರೆ ಎಂಬ ಅನುಮಾನ ಮೂಡಿದೆ ಎಂದು ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಕಾರಿಗೆ ಅವರ ಕಡೆಯವರೇ ಮೊಟ್ಟೆ ಹೊಡೆದಿರಬಹುದು ಎಂದು ಆರೋಪಿಸಿದರು.
ಸಚಿವ ಮುನಿರತ್ನ ಪ್ರತಿಕ್ರಿಯೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮೊಟ್ಟೆ ಅಲ್ಲ ಏನು ಬೇಕಾದರೂ ಬಳಸಿಕೊಳ್ಳುತ್ತಾರೆ. ಆದರೆ, ಕಾನೂನು ಅದರ ಕೆಲಸ ಮಾಡುತ್ತದೆ. ಅವರು ಮೊಟ್ಟೆ ರಾಜಕೀಯ ಅಲ್ಲ, ಸರ್ಕಾರದ ವಿರುದ್ಧ ಹೋರಾಟ ಮಾಡಲು ಅವರಿಗೆ ಯಾವುದೇ ಅಸ್ತ್ರ ಸಿಗುತ್ತಿಲ್ಲ ಎಂದರು.
ನಾವು ಮನಸು ಮಾಡಿದರೆ ಮುಖ್ಯಮಂತ್ರಿ, ಸಚಿವರು ಓಡಾಡಲು ಬಿಡಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇದು ಸಿದ್ದರಾಮಯ್ಯ ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ. ಹೆದರಿಸುವ ತಂತ್ರ ಎಂದರು. ನಿನ್ನೆ ಕೊಡಗಿನಲ್ಲಿ ನಡೆದಿರುವ ಘಟನೆ ತಪ್ಪು. ಕರ್ನಾಟಕದ ರಾಜಕಾರಣ ಶಾಂತಿಯುತವಾದ ರಾಜಕಾರಣ. ಸಿದ್ದರಾಮಯ್ಯ ಅವರಂತ ಹಿರಿಯರ ಕಾರಿಗೆ ಮೊಟ್ಟೆ ಎಸೆದಿರುವುದು ಖಂಡನೀಯ ಎಂದರು.
ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಅಂತಾರೆ, ನಿನ್ನೆ ಕುಮಾರಸ್ವಾಮಿ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅಂತಾರೆ. ಆದರೆ, ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. 2023ಕ್ಕೆ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಸಚಿವ ಮುನಿರತ್ನ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯ ವಿರುದ್ಧ ಪ್ರತಿಭಟನೆ.. ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಿಯಂತ್ರಿಸಲು ಪೊಲೀಸರ ಹರಸಾಹಸ