ಕೋಲಾರ: ಕೊರೊನಾ ಸೋಂಕಿನ ಆತಂಕದಿಂದ ದೇಶದಲ್ಲಿ ಲಾಕ್ಡೌನ್ ಹೇರಲಾಗಿದ್ದು, ಇದರಿಂದ ವ್ಯಾಪಾರ-ವಹಿವಾಟಿಗೆ ಬಹುದೊಡ್ಡ ಪೆಟ್ಟು ಬಿದ್ದಿದೆ.
ಬೀದಿಗೆ ಬಿದ್ದ ಬಾಳೆ ಬೆಳೆಗಾರರು ನಿತ್ಯವೂ ಮಾರುಕಟ್ಟೆ ಸೇರಬೇಕಿದ್ದ ಬಾಳೆ, ಹೂ, ತರಕಾರಿ ಸೇರಿದಂತೆ ಇನ್ನಿತರ ಬೆಳೆಗಳು ತೋಟಗಳಲ್ಲಿ ಕೊಳೆಯುತ್ತಿವೆ. ಇತ್ತ ಇವುಗಳನ್ನು ನಂಬಿ ಜೀವನ ಸಾಗಿಸುತ್ತಿದ್ದ ರೈತರು ಬೀದಿಗೆ ಬಿದ್ದಿದ್ದಾರೆ.
ತಾಲೂಕಿನ ಕಾಕಿನತ್ತ ಗ್ರಾಮದ ರೈತ ನಾಗರಾಜ ಎಂಬುವವರು ತಮ್ಮ ಜಮೀನಿನಲ್ಲಿ ಬಾಳೆ ಬೆಳೆದಿದ್ದರು. ಸೂಕ್ತ ಮಾರುಕಟ್ಟೆ ಸಿಗದೇ ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದಾರೆ. ಕೆಲವನ್ನು ಉಚಿತವಾಗಿ ಗ್ರಾಮದ ಜನರಿಗೆ ವಿತರಿಸುತ್ತಿದ್ದಾರೆ.
ಸುಮಾರು ನೂರಕ್ಕೂ ಹೆಚ್ಚು ಟನ್ ಬಾಳೆ ತೋಟದಲ್ಲಿಯೇ ಕೊಳೆಯುತ್ತಿದ್ದು, ಅಕ್ಕಪಕ್ಕದ ಗ್ರಾಮಗಳಿಗೂ ಹಂಚುವ ತೀರ್ಮಾನ ಮಾಡಿದ್ದಾರೆ. ಇವರ ತೋಟದಲ್ಲಿ ಅಂದಾಜು 6500ಕ್ಕೂ ಹೆಚ್ಚು ಬಾಳೆ ಗಿಡಗಳಿದ್ದು, ಇವುಗಳನ್ನು ಬೆಳೆಸಲು ಹತ್ತು ಲಕ್ಷಕ್ಕೂ ಹೆಚ್ಚು ಖರ್ಚು ಮಾಡಿದ್ದರು ಎನ್ನಲಾಗಿದೆ.