ಕೋಲಾರ :ನಗರದ ಎಪಿಎಂಸಿ ಮಾರುಕಟ್ಟೆಯಿಂದ ಟೊಮೆಟೊ ತುಂಬಿ ಜೈಪುರಕ್ಕೆ ಕಳುಹಿಸಿದ್ದ ಲಾರಿ ರಾಜಸ್ಥಾನದ ಜಾಲಾರಿ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಜುಲೈ 27ರಂದು ಕೋಲಾರದಿಂದ ರಾಜಸ್ಥಾನದ ಜೈಪುರಕ್ಕೆ ಸುಮಾರು 21 ಲಕ್ಷ ರೂ. ಮೌಲ್ಯದ 750 ಬಾಕ್ಸ್ ಟೊಮೆಟೊದೊಂದಿಗೆ ಕಳುಹಿಸಲಾಗಿದ್ದ ಲಾರಿ ನಾಪತ್ತೆಯಾಗಿತ್ತು.
ಘಟನೆಯ ವಿವರ:ಕೋಲಾರ ಎಪಿಎಂಸಿ ಮಾರುಕಟ್ಟೆಯ ಎ.ಜಿ ಟ್ರೇಡರ್ಸ್ನ ಸಕ್ಲೇನ್ ಹಾಗೂ ಎಸ್.ವಿ.ಟಿ ಟ್ರೇಡರ್ಸ್ನ ಮುನಿರೆಡ್ಡಿ ಎಂಬುವರು ಸುಮಾರು 750 ಬಾಕ್ಸ್ ಟೊಮೆಟೊವನ್ನು ಜುಲೈ 27ರಂದು ಜೈಪುರಕ್ಕೆ ಮೆಹತ್ ಟ್ರಾನ್ಸ್ಪೋರ್ಟ್ಗೆ ಸೇರಿದ್ದ ಲಾರಿಯೊಂದರಲ್ಲಿ ಕಳುಹಿಸಿದ್ದರು. ಲಾರಿಯು ಭಾನುವಾರ ರಾತ್ರಿ ಜೈಪುರಕ್ಕೆ ತಲುಪಬೇಕಿತ್ತು. ಆದರೆ ಭಾನುವಾರ ಸಂಜೆಯಿಂದ ಲಾರಿ ಹಾಗೂ ಚಾಲಕ ಅನ್ವರ್ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮೆಹತ್ ಟ್ರಾನ್ಸ್ಪೋರ್ಟ್ ಮಾಲೀಕ ಸಾದಿಕ್ ಅವರಿಗೂ ಲಾರಿ ಸಂಪರ್ಕಕ್ಕೆ ಲಭ್ಯವಾಗಿರಲಿಲ್ಲ. ಈ ಬಗ್ಗೆ ಎಪಿಎಂಸಿ ವರ್ತಕರು ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಲಾರಿ ಚಾಲಕನಿಂದ ಟೊಮೆಟೊ ಮಾರಾಟ:ಲಾರಿ ಚಾಲಕ ಅನ್ವರ್ ಯಾರ ಸಂಪರ್ಕಕ್ಕೂ ಸಿಗದೆ ಲಾರಿಯೊಂದಿಗೆ ಪರಾರಿಯಾಗಿದ್ದು, ಟೊಮೆಟೊ ಮಾರಾಟ ಮಾಡಿರುವುದಾಗಿ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಕೋಲಾರದಿಂದ ರಾಜಸ್ಥಾನಕ್ಕೆ ಹೋಗಬೇಕಿದ್ದ ಟೊಮೆಟೊವನ್ನು ಗುಜರಾತ್ನ ಅಹ್ಮದಾಬಾದ್ನಲ್ಲಿ ಪ್ರಕಾಶ್ ಎಂಬುವರಿಗೆ ಮಾರಾಟ ಮಾಡಿದ್ದಾನೆ. ಬಳಿಕ ರಾಜಸ್ಥಾನದ ಜಾಲಾರಿ ಎಂಬಲ್ಲಿ ಲಾರಿ ಬಿಟ್ಟು ಪರಾರಿಯಾಗಿದ್ದಾನೆ ಎಂದು ಗೊತ್ತಾಗಿದೆ. ಈಗಾಗಲೇ ಘಟನೆ ಸಂಬಂಧ ಕೋಲಾರದ ಮೆಹತ್ ಟ್ರಾನ್ಸ್ಪೋರ್ಟ್ ಮಾಲೀಕ ಸಾಧಿಕ್ ಗುಜರಾತ್ಗೆ ತೆರಳಿದ್ದಾರೆ. ಸದ್ಯ ಲಾರಿ ಮಾಲೀಕರು ಗುಜರಾತ್ನ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಘಟನೆ ಬಗ್ಗೆ ದೂರು ದಾಖಲಿಸಿದ್ದಾರೆ.