ಕೊಡಗು:ಅಪರಿಚಿತ ವ್ಯಕ್ತಿಯೊಬ್ಬಯುವತಿಯೋರ್ವಳನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ವಿರಾಜಪೇಟೆ ತಾಲೂಕಿನ ನಾಂಗಲ ಗ್ರಾಮದಲ್ಲಿ ನಡೆದಿದೆ. ಆರತಿ (24) ಮೃತ ಯುವತಿ. ಈಕೆ ಬುಟ್ಟಿಯಂಡ ಮಾದಪ್ಪ ಹಾಗೂ ಸುನಂದ ದಂಪತಿಯ ಪುತ್ರಿ. ಮನೆಯ ಸಮೀಪದಲ್ಲೇ ಹತ್ಯೆ ನಡೆದಿದೆ. ಯುವತಿಯ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮನೆಯಲ್ಲಿದ್ದ ಆರತಿಯನ್ನು ರಾತ್ರಿ ವೇಳೆ ಹೊರಗೆ ಕರೆದು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮಚ್ಚಿನ ಏಟಿಗೆ ಕೂಗಾಡಿದ್ದನ್ನು ಕೇಳಿ ಮನೆಯವರು ಸ್ಥಳಕ್ಕೆ ಬಂದಿದ್ದಾರೆ, ಆದ್ರೆ ಪೋಷಕರು, ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲೇ ಯುವತಿ ಸ್ಥಳದಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ವ್ಯಕ್ತಿಯು ಮಚ್ಚಿನಿಂದ ಹಲ್ಲೆ ಮಾಡಿದ್ದರಿಂದ ರಕ್ತದ ಮಡುವಿನಲ್ಲೇ ಯುವತಿ ಪ್ರಾಣ ಬಿಟ್ಟಿದ್ದಾಳೆ. ಕೊಲೆ ಮಾಡಿದ ವ್ಯಕ್ತಿ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ.
ಸಮೀಪದ ಕಂದಂಗಳ ಗ್ರಾಮದ ತಮ್ಮಯ್ಯ ಎಂಬಾತನೇ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳಿಂದ ಆರೋಪಿ ತಮ್ಮಯ್ಯ ತಮ್ಮ ಮಗಳಿಗೆ ಸಕಾರಣವಿಲ್ಲದೆ ಕಿರುಕುಳ ಕೊಡುತ್ತಿದ್ದ ಎಂದು ಪೋಷಕರು ಆರೋಪ ಮಾಡಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ವಿರಾಜ್ ಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಹೆಲ್ಮೆಟ್ ಪತ್ತೆ:ಮನೆಯ ಪಕ್ಕದಲ್ಲಿ ಆರತಿ ಕೊಲೆಯಾದ ಸ್ಥಳದಲ್ಲಿ ವ್ಯಕ್ತಿಯ ಹೆಲ್ಮೆಟ್ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ಬಳಿಕ ಹೆಲ್ಮೆಟ್ ತಮ್ಮಯ್ಯ ಎಂಬ ವ್ಯಕ್ತಿಯದ್ದು ಎಂಬುದು ಗೊತ್ತಾಗಿದೆ. ಅಲ್ಲದೆ, ಅನತಿ ದೂರದಲ್ಲೇ ಬೈಕ್ ಕೂಡ ಕಂಡುಬಂದಿದೆ.
ಆರೋಪಿಗೆ ಶೋಧ ಕಾರ್ಯ: ತಮ್ಮಯ್ಯನ ಮೊಬೈಲ್ ಹಾಗೂ ಚಪ್ಪಲಿಯೂ ಸಹ ಸ್ಥಳದಲ್ಲಿ ಪತ್ತೆಯಾಗಿದೆ. ಅಲ್ಲದೆ, ಸ್ಥಳದಲ್ಲಿ ವಿಷದ ಬಾಟಲ್ ಕೂಡ ಕಂಡುಬಂದಿದೆ. ಕೊಲೆ ಮಾಡಿದ ಬಳಿಕ ಆರೋಪಿಯೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಕೊಲೆಯಾದ ಮನೆಯ ಪಕ್ಕದ ಕೆರೆಯಲ್ಲಿ ಅಗ್ನಿಶಾಮಕ ದಳ ಮತ್ತು ಪೋಲಿಸರು ಶೋಧ ಕಾರ್ಯ ನಡೆಸಿದ್ದಾರೆ. ವಿರಾಜಪೇಟೆ ತಾಲೂಕು ಆಸ್ಪತ್ರೆಯಲ್ಲಿ ಯುವತಿಯ ಶವ ಪರೀಕ್ಷೆ ನಡೆಸಿ ಮನೆಯವರಿಗೆ ಶವ ನೀಡಲಾಗಿದೆ. ಆರೋಪಿಗಾಗಿ ಪೋಲಿಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಆರೋಪಿಯ ಬಂಧನ ಬಳಿಕವೇ ಕೊಲೆಗೆ ಸ್ಷಷ್ಟ ಕಾರಣ ಗೊತ್ತಾಗಲಿದೆ.
ಯುವಕ ಆತ್ಮಹತ್ಯೆ?:ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೊಡಗು ತಾಲೂಕಿನ ಗರ್ವಾಲೆ ಗ್ರಾಮದ ರಾಜೇಶ್ ಚಂಗಪ್ಪ (28) ಎಂಬಾತನೆ ಮೃತ ಯುವಕ. ಶನಿವಾರ ಮಧ್ಯರಾತ್ರಿ ತನ್ನ ವಾಹನದಲ್ಲಿ ಗರ್ವಾಲೆಗೆ ತೆರಳುತ್ತಿದ್ದ ವೇಳೆ ಮಾದಾಪುರ ಸಮೀಪದ ಮುವತೊಕ್ಕಲು ಗ್ರಾಮದ ರಸ್ತೆಯಲ್ಲಿ ಕಾರು ಅಪಘಾತವಾಗಿದೆ. ಈ ವೇಳೆ ವಾಹನ ಅಪಘಾತವಾಗಿದೆ ಎಂದು ಮನೆಗೆ ಕರೆ ಮಾಡಿ ತಿಳಿಸಿದ್ದಾನೆ.
ಆದರೆ ಯುವಕ ಮನೆಗೆ ಬಂದಿರಲಿಲ್ಲ. ಹೀಗಾಗಿ ಗಾಬರಿಗೊಂಡ ಮನೆಯವರು ಆತನಿಗಾಗಿ ಹುಡುಕಾಟ ನಡೆಸಿದ್ದಾರೆ. ನಂತರ ಡಾಲಿ ಪೂವಯ್ಯ ಎಂಬುವರಿಗೆ ಸೇರಿದ ಕಾಫಿ ತೋಟದೊಳಗೆ ರಿವಾಲ್ವರ್ನಿಂದ ಗುಂಡು ಹಾರಿಸಿಕೊಂಡಿರುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಳೆದ ಮೂರು ತಿಂಗಳ ಹಿಂದೆ ರಿವಾಲ್ವರ್ ಖರೀದಿಸಲಾಗಿತ್ತು ಎಂದು ತಿಳಿದುಬಂದಿದೆ. ಈ ಬಗ್ಗೆ ಕುಟುಂಬದವರು ಸೋಮವಾರಪೇಟೆ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಭಾನುವಾರ ಸಂಜೆ ಮೃತದೇಹ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ:ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷರ ಭೀಕರ ಹತ್ಯೆ ಪ್ರಕರಣ: 11 ಜನರ ವಿರುದ್ಧ ಎಫ್ಐಆರ್