ಕೊಡಗು: ಜಿಲ್ಲೆಯಲ್ಲಿ 2018 ರ ಆಗಸ್ಟ್ನಲ್ಲಿ ಸುರಿದ ಭಾರಿ ಮಳೆಯಿಂದ ನೆಲೆ ಕಳೆದುಕೊಂಡು ಮನೆ ಹಸ್ತಾಂತರಕ್ಕೆ ಬಾಕಿ ಇದ್ದ 75 ಕುಟುಂಬಗಳಿಗೆ ಪ್ರಾದೇಶಿಕ ಸಾರಿಗೆ ಕಚೇರಿ ಬಳಿ ನಿರ್ಮಿಸಲಾಗಿರುವ ಮನೆಗಳನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರ ಅಧ್ಯಕ್ಷತೆಯಲ್ಲಿ ಚೀಟಿ/ಲಾಟರಿ ತೆಗೆಯುವ ಮೂಲಕ ಮನೆ ಹಂಚಿಕೆ ಮಾಡಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ರಾಜೀವ್ ಗಾಂಧಿ ವಸತಿ ನಿಗಮದ ಇಂಜಿನಿಯರ್ ಶ್ರೀನಿವಾಸ್ ಹಾಗೂ ಫಲಾನುಭವಿಗಳ ಸಮ್ಮುಖದಲ್ಲಿ ಚೀಟಿ ತೆಗೆಯುವ ಮೂಲಕ ಮನೆ ಹಂಚಿಕೆ ಮಾಡಲಾಯಿತು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು 2018 ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿದ್ದ ಕುಟುಂಬಗಳಿಗೆ ಮೊದಲ ಹಂತದಲ್ಲಿ ಕರ್ಣಂಗೇರಿಯಲ್ಲಿ 35 ಮನೆಗಳು, ಮಾದಾಪುರ ಬಳಿಯ ಜಂಬೂರಿನಲ್ಲಿ 383, ಮದೆನಾಡು ಬಳಿ 80 ಮನೆಗಳು, ಹಾಗೆಯೇ ಹಾಕತ್ತೂರು ಬಳಿಯ ಬಿಳಿಗೇರಿಯಲ್ಲಿ 22, ಮತ್ತು ಗಾಳಿಬೀಡು ಬಳಿ 140 ಮನೆಗಳು ಸೇರಿದಂತೆ ಒಟ್ಟು ಮೂರು ಹಂತದಲ್ಲಿ 660 ಮನೆಗಳನ್ನು ಸಂತ್ರಸ್ತರಿಗೆ ಹಸ್ತಾಂತರಿಸಲಾಗಿದೆ.