ಮಡಿಕೇರಿ(ಕೊಡಗು):ಜಿಲ್ಲೆಯಾದ್ಯಂತ ಹುತ್ತರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಧಾನ್ಯಲಕ್ಷ್ಮಿಯನ್ನು ಭತ್ತದ ಗದ್ದೆಯಿಂದ ಮನೆಗಳಿಗೆ ತಂದು ತುಂಬಿಸಿಕೊಳ್ಳುವುದೇ ಈ ಹಬ್ಬದ ವಿಶೇಷ. ಈ ಹಬ್ಬದಲ್ಲಿ ಕೊಡಗಿನ ಮೂಲ ನಿವಾಸಿಗಳ ಜನಪದ ಕಲೆಗಳು ಅನಾವರಣಗೊಳ್ಳುತ್ತವೆ.
ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ ಕೊಡಗಿನ ಸುಗ್ಗಿಹಬ್ಬ ಎಂದೇ ಹೆಸರಾಗಿರುವ ಹುತ್ತರಿ ಹಬ್ಬವನ್ನು ಮನೆ, ದೇವಾಲಯಗಳಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಹುತ್ತರಿ ಎಂದರೆ ಹೊಸ ಅಕ್ಕಿ ಎಂದರ್ಥ. ಕೊಡಗಿನಲ್ಲಿ ಇದು ಹುತ್ತರಿ ಹಬ್ಬ ಎಂದೇ ಪ್ರಸಿದ್ಧಿ. ಒಂದು ಶುಭ ಮುಹೂರ್ತದಲ್ಲಿ ಭತ್ತದ ಗದ್ದೆಯಿಂದ ಧಾನ್ಯಲಕ್ಷ್ಮಿಯನ್ನು ವಿಜೃಂಭಣೆಯಿಂದ ಮನೆಗೆ ತಂದು ತುಂಬಿಸಿಕೊಳ್ಳುವುದೇ ಹಬ್ಬದ ವಿಶೇಷವಾಗಿದೆ.
ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ ಕೇರಳದ ಓಣಂ ಹಬ್ಬ ಕಳೆದು ಸರಿಯಾಗಿ ಮೂರು ತಿಂಗಳಲ್ಲಿ ಈ ಹಬ್ಬ ಜರುಗುತ್ತದೆ. ಈ ಹುತ್ತರಿಯನ್ನು ಜಿಲ್ಲೆಯ ಹಲವೆಡೆ ಹಗಲು ಆಚರಣೆ ಮಾಡಿದರೆ, ಮತ್ತೆ ಕೆಲವೆಡೆ ರಾತ್ರಿ ಆಚರಣೆ ಮಾಡುತ್ತಾರೆ. ದೀಪಾವಳಿಯಂತೆ ಕೊಡಗಿನಲ್ಲಿ ಹುತ್ತರಿ ಹಬ್ಬಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಲಾಗುತ್ತದೆ. ಮನೆಗಳನ್ನು ಸುಣ್ಣ-ಬಣ್ಣ, ತಳಿರು-ತೋರಣಗಳಿಂದ ಅಲಂಕರಿಸಲಾಗುತ್ತದೆ. ಇಂದು ಸಹ ಜಿಲ್ಲೆಯಾದ್ಯಂತ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ ಹಬ್ಬದ ದಿನ ಕೊಡಗಿನ ಇಗ್ಗುತ್ತಪ್ಪ ದೇವಾಲದಲ್ಲಿ ಮೊದಲು ಆಚರಣೆ ನಡೆಸಲಾಗುತ್ತದೆ. ನಂತರ ಜಿಲ್ಲೆಯ ವಿವಿಧ ಭಾಗದಲ್ಲಿ ಸಂಭ್ರಮಾಚರಣೆ ಇರುತ್ತೆ. ಹುತ್ತರಿ ಹಬ್ಬದಂದು ಮೊದಲಿಗೆ ನೆರೆ ಕಟ್ಟಲಾಗುತ್ತದೆ. ನಂತರ ಮನೆಯವರು ಊರಿನವರೆಲ್ಲಾ ಸೇರಿ ನೇರವಾಗಿ ಭತ್ತದ ಗದ್ದೆಗೆ ತೆರಳಿ ಕದಿರು ಕೊಯ್ಯುತ್ತಾರೆ. ಕದಿರು ಕುಯ್ಯುವಾಗ ಶುಭಸೂಚಕವಾಗಿ ಪೂರ್ವ ದಿಕ್ಕಿಗೆ ಗುಂಡು ಹಾರಿಸಲಾಗುತ್ತದೆ. ನಂತರ ಗದ್ದೆಯಲ್ಲಿ ಕುಯ್ದ ಬೆಳೆಯನ್ನು ಸಾಂಪ್ರದಾಯಿಕವಾಗಿ ಮೆರವಣಿಗೆ ಮೂಲಕ ತರಲಾಗುತ್ತದೆ. ಇದೇ ವೇಳೆ ಕೊಡಗಿನ ಜನರು ಪೊಲಿ ಪೊಲಿಯೆ ಬಾ ಎಂದು ಘೋಷವಾಕ್ಯ ಕೂಗುತ್ತಾರೆ. ಇದು ಈ ಹಬ್ಬದ ಮತ್ತೊಂದು ವಿಶೇಷತೆ.
ಕೊಡಗಿನಲ್ಲಿ ಹುತ್ತರಿ ಹಬ್ಬದ ಸಂಭ್ರಮ ಕದಿರನ್ನು ದೇವಸ್ಥಾನಕ್ಕೆ ತಂದು ವಿಶೇಷ ಪೂಜೆ ಸಲ್ಲಿಸಿದ ನಂತರ ದೊಡ್ಡಮನೆಗೆ ತಂದು ಪೂಜೆ ನೆರವೇರಿಸಲಾಗುತ್ತದೆ. ಗದ್ದೆಯಿಂದ ತಂದ ಹೊಸ ಅಕ್ಕಿಯನ್ನು ದೇವರಿಗೆ ನೈವೇದ್ಯ ಅರ್ಪಿಸಲಾಗುತ್ತದೆ. ನಂತರ ಅದನ್ನು ತಮ್ಮ ತಮ್ಮ ಮನೆಗಳಿಗೆ ತೆಗೆದುಕೊಂಡು ಹೋಗುವ ಸಂಪ್ರದಾಯ ಇಂದಿಗೂ ಕೊಡಗಿನಲ್ಲಿ ನಡೆದುಕೊಂಡು ಬಂದಿದೆ.
ಇನ್ನೂ ಕೊಡಗಿನ ನಾನಾ ಕಡೆಗಳಲ್ಲೂ ಹಬ್ಬವನ್ನು ವಿಶೇವಾಗಿ ಆಚರಿಸಲಾಯಿತು. ಮಡಿಕೇರಿಯ ಓಂಕಾರೇಶ್ವರ ದೇವಾಯ, ಕೊಡಗಿನ ಕೊಡವ ಸಮಾಜ, ಗೌಡ ಸಮಾಜಗಳಲ್ಲೂ ಕೂಡ ಅದ್ಧೂರಿಯಾಗಿ ಹಬ್ಬ ಜರುಗಿತು. ಕೈಲ್ ಮುಹೂರ್ತ ಹಬ್ಬವನ್ನು ಬಿಟ್ಟರೆ ಕೊಡಗಿನಲ್ಲಿ ಈ ಹುತ್ತರಿ ಹಬ್ಬವನ್ನು ವೈಭವಯುತವಾಗಿ ಕೊಡವರು ಆಚರಿಸುತ್ತಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ : ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ 'Yellow alert'