ಕೊಡಗು:ನಾಪೋಕ್ಲುವಿನಲ್ಲಿ ನಡೆಯುತ್ತಿರುವ 23ನೇ ಕೊಡವ ಕೌಟುಂಬಿಕ ಹಾಕಿ ಟೂರ್ನಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಉದ್ಘಾಟಿಸಿದರು. ಕೊಡವ ಸಾಂಪ್ರದಾಯಿಕ ಉಡುಪು ತೊಟ್ಟು, ಕೊಡವ ಭಾಷೆಯಲ್ಲಿ ಮಾತು ಆರಂಭಿಸಿದ ಅವರು, ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಚಾಲನೆ ನೀಡಿದ್ದು ಎಲ್ಲರ ಗಮನ ಸೇಳೆಯಿತು.
ನಂತರ ಮಾತನಾಡಿದ ಅವರು, ಇದೊಂದು ವಿಶೇಷ ಕ್ರೀಡಾಕೂಟ, ಕೊಡಗಿನ ಎಲ್ಲ ಮನೆತನಗಳು ನಡೆಸುವ ಕ್ರೀಡಾಕೂಟವಾಗಿದೆ. ಕೊಡಗಿನ ಕುಟುಂಬಗಳು ಅತ್ಯಂತ ಒಳ್ಳೆಯ ಸಂಬಂಧಗಳನ್ನು ಹೊಂದಿರುವ ಕುಟುಂಬಗಳು, ನಿಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಎಲ್ಲರು ಗೌರವಿಸುವಂತವಾಗಿವೆ. ನಿಮ್ಮ ವೇಷಭೂಷಣ ಮತ್ತು ಆಹಾರದಿಂದ ಹಿಡಿದು ಎಲ್ಲವೂ ವಿಶೇಷವಾಗಿದೆ, ಹಾಕಿ ಕೊಡವರಿಗೆ ಅತ್ಯಂತ ಪ್ರೀಯವಾದ ಕ್ರೀಡೆಯಾಗಿದೆ ಎಂದರು.
ನಶಿಸಿ ಹೋಗುತ್ತಿರುವ ಕೊಡವ ಕುಟುಂಬಗಳ ನಡುವಿನ ಸಂಬಂಧ ಮತ್ತೆ ಬೆಸೆಯಲು ಕೌಟುಂಬಿಕ ಹಾಕಿ ಉತ್ಸವ ಸಹಕಾರಿಯಾಗಿದೆ ಇದನ್ನು 23 ವರ್ಷಗಳಿಂದ ಮಾದರಿಯಾಗಿ ನಡೆಸಿಕೊಂಡು ಬಂದಿದ್ದೀರಿ. ಹಾಕಿ ಕ್ರೀಡಾಕೂಟವನ್ನು ಪ್ರಾರಂಭ ಮಾಡಿದ ಹಿರಿಯರಿಂದ ಹಿಡಿದು ಇಂದಿನವರಿಗೆಲ್ಲರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಕುಟುಂಬಗಳು ಒಂದಾಗಬೇಕು, ಕುಟುಂಬಗಳ ಸಂಬಂಧ ಚೆನ್ನಾಗಿರಬೇಕು. ಇದು ನಮ್ಮ ಭಾರತದ ಪರಂಪರೆ ಎಂದು ಹೇಳಿದರು.
ಈ ಕೌಟುಂಬಿಕ ಹಾಕಿ ಉತ್ಸವ ಯಶಸ್ವಿಯಾಗಲಿ ಹೀಗೆ ನಿತ್ಯ ನಿರಂತರ ಮುಂದುವರಿಯಲಿ. ಕೆ.ಜಿ.ಬೋಪಯ್ಯ ಅವರು ಈ ಹಿಂದೆ ಕ್ರಿಕೆಟ್ ಕ್ರೀಡೆಗೆ ಅನುದಾನ ಕೋರಿ ಬಂದಿದ್ದರು, ನಾನು ಇಲ್ಲ ಎಂದು ಹೇಳಿ ಕಳಿಸಿದೆ. ಆದರೆ ಹಾಕಿ ಹಬ್ಬಕ್ಕೆ ಅನುದಾನ ಕೇಳಲು ಬಂದಾಗ ಅವರ ನಿರೀಕ್ಷೆ 50 ಲಕ್ಷ ಇತ್ತು. ಆದರೆ ನಾನು ಒಂದು ಕೋಟಿ ರೂಪಾಯಿಯನ್ನು ನೀಡಿದ್ದೇನೆ. ಇದಕ್ಕೆ ಕಾರಣ ಕೊಡಗಿನವರ ಕ್ರೀಡೆ ಹಾಕಿ ಎಂದು ನನಗೆ ತಿಳಿದಿದೆ. ಅದನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.