ಕರ್ನಾಟಕ

karnataka

By

Published : Aug 27, 2020, 4:51 PM IST

ETV Bharat / state

ಕೊಡಗಿನಲ್ಲಿ ಪ್ರಕೃತಿ ವಿಕೋಪ: ಅಂದಾಜು 500 ಕೋಟಿ ರೂ. ಬೆಳೆ, ಆಸ್ತಿ ಹಾನಿ

ಈ ಬಾರಿ ಪ್ರವಾಹದಿಂದ ಸುಮಾರು 14 ಕಡೆಗಳಲ್ಲಿ ಭೂಕುಸಿತವಾಗಿದೆ. ‌62 ಸ್ಥಳಗಳನ್ನು ಪ್ರವಾಹಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಇದರ ಪರಿಣಾಮ ಸುಮಾರು 500 ಕೋಟಿ ರೂ ನಷ್ಟವುಂಟಾಗಿದ್ದು, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Kodagu district
ಕೊಡಗು ಜಿಲ್ಲೆಯಲ್ಲಿ ಪ್ರವಾಹ 500 ಕೋಟಿ ರೂ. ಬೆಳೆ ಹಾಗೂ ಆಸ್ತಿ ಹಾನಿ

ಕೊಡಗು:ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಸಂಭವಿಸುತ್ತಿರುವ ಪ್ರಕೃತಿ ವಿಕೋಪಕ್ಕೆ ಸಾಕಷ್ಟು ಕಷ್ಟ ನಷ್ಟ ಉಂಟಾಗಿದೆ.‌ ಆದರೆ ಕಳೆದೆರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ನಷ್ಟದ ಪ್ರಮಾಣ ಸ್ವಲ್ಪ ಕಡಿಮೆಯೆಂದು ಹೇಳಬಹುದು. ಆದ್ರೆ,‌ ‌ಹಿಂದಿನ ವರ್ಷಗಳಲ್ಲಿ ಸರ್ಕಾರ ಘೋಷಿಸಿದ ಪರಿಹಾರ ಸಂತ್ರಸ್ಥರಿಗೆ ಸಿಕ್ಕಿದೆಯೇ?.

ಕೊಡಗು ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಿಂದ ನಿರಂತರವಾಗಿ ಪ್ರಕೃತಿ ವಿಕೋಪ ಸಂಭವಿಸುತ್ತಿದೆ. ಒಂದೆಡೆ ಜೀವಹಾನಿ ಮತ್ತೊಂದೆಡೆ, ಆಸ್ತಿ-ಪಾಸ್ತಿ ನಷ್ಟ. ಇನ್ನೊಂದೆಡೆ ಗುಡ್ಡ ಕುಸಿತದಂಥ ಘಟನೆಗಳ ಪರಿಣಾಮ ಸಾವಿರಾರು ಕುಟುಂಬಗಳು ಸಂತ್ರಸ್ಥರಾಗಿ ಜೀವನ ಸಾಗಿಸುತ್ತಿದ್ದಾರೆ. ಪ್ರತೀ ವರ್ಷ ಅಧಿಕಾರಿಗಳು ನಷ್ಟದ ಅಂದಾಜು ಮಾಡುವುದು, ಸಂತ್ರಸ್ಥರ ಗೋಳು ಕೇಳುವುದು, ಪರಿಹಾರ ನೀಡುವುದನ್ನು ಮಾಡುತ್ತಿದ್ದಾರೆ. ಈ ಬಾರಿ ಸುಮಾರು 14 ಕಡೆಗಳಲ್ಲಿ ಭೂಕುಸಿತವಾದರೆ, ‌62 ಸ್ಥಳಗಳನ್ನು ಪ್ರವಾಹಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಈ ಸಲ ಅಂದಾಜು 500 ಕೋಟಿ ರೂ ನಷ್ಟವುಂಟಾಗಿದ್ದು, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 34,170 ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕಾ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. (ಕೃಷಿ ಬೆಳೆ-3200 ಹೆಕ್ಟೇರ್, ತೋಟಗಾರಿಕಾ ಬೆಳೆ-2,970 ಹೆಕ್ಟೇರ್, ಕಾಫಿ ಬೆಳೆ-28,000 ಹೆಕ್ಟೇರ್).

ಕಳೆದ ಎರಡು ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಈ ಸಲ ಉಂಟಾದ ನಷ್ಟದ ಪ್ರಮಾಣ ಕಡಿಮೆ. 2018ರಲ್ಲಿ ಮನೆ ಕಳೆದುಕೊಂಡವರಿಗೆ ಸರ್ಕಾರ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದೆ. ಈ ನಿಟ್ಟಿನಲ್ಲಿ ಸುಮಾರು 900 ಕ್ಕೂ ಹೆಚ್ಚು ಮನೆಗಳ ನಿರ್ಮಾಣವಾಗಿದೆ. ಹಲವು ಮನೆಗಳು ನಿರ್ಮಾಣದ ಹಂತದಲ್ಲಿವೆ. 2019 ರಲ್ಲಿ 835 ಕುಟುಂಬಗಳು ಸೂರು ಕಳೆದುಕೊಂಡಿದ್ದು, ಮನೆ ನಿರ್ಮಿಸಲು ಸರ್ಕಾರ 5 ಲಕ್ಷ ರೂ ನೀಡುವುದಾಗಿ ಹೇಳಿದ್ದು ಮೊದಲ ಕಂತಲ್ಲಿ ಒಂದು ಲಕ್ಷ ಹಣ ವಿತರಿಸಲಾಗಿದೆ. ಸಂತ್ರಸ್ಥರಿಗೆ 5 ತಿಂಗಳ ಮನೆ ಬಾಡಿಗೆಯನ್ನು ನೀಡಲಾಗಿದ್ದು, ಉಳಿದ ಐದು ತಿಂಗಳ ಬಾಡಿಗೆ ಬಾಕಿ ಇದೆ. ಇದರ ಜೊತೆಗೆ 1,591 ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಪರಿಹಾರ ನೀಡಲಾಗಿದೆ.

For All Latest Updates

ABOUT THE AUTHOR

...view details