ಕಲಬುರಗಿ ಬೀದರ್ ಪ್ಯಾಸೆಂಜರ್ ರೈಲಿನ ಮೇಲೆ ಕಲ್ಲು ತೂರಾಟ ಕಲಬುರಗಿ: ಕಲಬುರಗಿಯಿಂದ ಬೀದರ್ ಮಾರ್ಗವಾಗಿ ಹೊರಟಿದ್ದ ಪ್ಯಾಸೆಂಜರ್ ರೈಲಿನ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಶನಿವಾರ ಮಧ್ಯಾಹ್ನ 1.30ರ ಸುಮಾರಿಗೆ ಕಲಬುರಗಿ - ಬೀದರ್ ರೈಲು ತಾಜಸುಲ್ತಾನಪುರ ರೈಲ್ವೆ ನಿಲ್ದಾಣ ಬಳಿ ಬರುತ್ತಿದ್ದಂತೆ ಕಿಡಿಗೇಡಿಗಳು ಕೃತ್ಯ ಎಸಗಿದ್ದಾರೆ.
ಮಹಿಳಾ ಪ್ರಯಾಣಿಕರೊಬ್ಬರ ಕುತ್ತಿಗೆಗೆ ಕಲ್ಲು ಬಡಿದು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೊರಳ ಮಂಗಳಸೂತ್ರ ಕಡಿದು ಬಿದ್ದಿದೆ. ರೈಲಿನಲ್ಲಿದ್ದ ಸಹ ಪ್ರಯಾಣಿಕರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಇದೀಗ ಚೇತರಿಕೆ ಕಂಡಿದ್ದಾರೆ. ವಾಡಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಸಮಾರಂಭದಲ್ಲಿ ಮಾರಕಾಸ್ತ್ರ ಹಿಡಿದು ನೃತ್ಯ : ನಗರದ ಸಾದತ್ ಪಂಕ್ಷನ್ ಹಾಲ್‍ನಲ್ಲಿ ನಡೆದ ಸಮಾರಂಭದಲ್ಲಿ ಕೈಯಲ್ಲಿ ಮಾರಕಾಸ್ತ್ರ ಹಿಡಿದು ಡ್ಯಾನ್ಸ್ ಮಾಡಿದ ಇಬ್ಬರು ಯುವಕರ ವಿರುದ್ಧ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಕಾರ್ಯಕ್ರಮದಲ್ಲಿ ಅನ್ವರ್ ಮತ್ತು ರಶೀದ್ ಎಂಬವರು ಚಾಕು, ಮಚ್ಚು ಹಿಡಿದುಕೊಂಡು ನೃತ್ಯ ಮಾಡುತ್ತಿರುವುದನ್ನು ಗಸ್ತಿನಲ್ಲಿದ್ದ ಪೊಲೀಸರು ಗಮನಿಸಿದ್ದು, ಇಬ್ಬರ ವಿರುದ್ಧ ಎಂ.ಬಿ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವೇಶ್ಯಾವಾಟಿಕೆ ದಂಧೆ, ಲಾಡ್ಜ್ ಮೇಲೆ ಪೊಲೀಸರ ದಾಳಿ : ಕಲಬುರಗಿಯ ಜೇವರ್ಗಿ ಕ್ರಾಸ್‍ನಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶ (ಇಂಡಸ್ಟ್ರಿಯಲ್ ಏರಿಯಾ)ದಲ್ಲಿರುವ ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇಲೆ ಸ್ಟೇಷನ್ ಪೊಲೀಸ್ ಠಾಣೆಯ ಪಿಎಸ್‍ಐ ವಂದನಾ, ಸಿಬ್ಬಂದಿ ಮಹೇಶ್ವರಿ, ಮಲ್ಲನ ಗೌಡ, ರಾಘವೇಂದ್ರ ಮತ್ತು ಸಂಗಣ್ಣ ಅವರು ದಾಳಿ ನಡೆಸಿ ಕೃತ್ಯದಲ್ಲಿ ತೊಡಗಿದ್ದ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದ ಕರಣಕುಮಾರ ದೊಡ್ಡಮನಿ ಎಂಬಾತನನ್ನು ವಶಕ್ಕೆ ಪಡೆದು, ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಚಿದಾನಂದ ಪುಟಗಿ ಎಂಬಾತ ಲಾಡ್ಜ್ ಬಾಡಿಗೆ ಪಡೆದು ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ಕಡೆಯಿಂದ ಹೆಣ್ಣು ಮಕ್ಕಳನ್ನು ಕರೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂಬ ವಿಚಾರ ಪೊಲೀಸ್ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ. ಲಾಡ್ಜ್ ಮಾಲೀಕ ರಾಘವೇಂದ್ರ, ಮ್ಯಾನೇಜರ್ ಸಂದೀಪ್ ಹಾಗು ಚಿದಾನಂದ ಪುಟಗಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಲಕ ನಾಪತ್ತೆ, ಅಪಹರಣ ಶಂಕೆ :ಕಲಬುರಗಿ ನಗರದ ಗಾಜಿಪುರದಿಂದ ಮೂಕ ಮತ್ತು ಕಿವುಡ ಬಾಲಕನೊಬ್ಬ ಕಾಣೆಯಾಗಿದ್ದಾನೆ. ಬಾಲಕನನ್ನು ಅಪಹರಣ ಮಾಡಲಾಗಿದೆ ಎಂದು ಆತನ ಪಾಲಕರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಹುಟ್ಟಿನಿಂದಲೇ ಕಿವಿ ಕೇಳಿಸದ ಮತ್ತು ಮಾತನಾಡಲು ಬರದ ಸೂರಜ್ ಮಡಿವಾಳ (14) ಎಂಬ ಬಾಲಕ ವಿಶ್ವವಿದ್ಯಾಲಯದ ಎದರುಗಡೆ ಇರುವ ಸಿದ್ಧಾರ್ಥ ಮೂಕ ಮತ್ತು ಕಿವುಡ ವಿದ್ಯಾರ್ಥಿಗಳ ಶಾಲೆಯಲ್ಲಿ 9ನೇ ತರಗತಿಯಲ್ಲಿ ತನ್ನ ಸಹೋದರ ಆದಿತ್ಯನ ಜೊತೆ ಓದುತ್ತಿದ್ದ. ಜುಲೈ 5ರಂದು ಈತ ಶಾಲೆಗೆ ಹೋಗಿರಲಿಲ್ಲ. ಶಾಲೆಗೆ ಏಕೆ ಹೋಗಿಲ್ಲ ಎಂದು ತಾಯಿ ಕೇಳಿದ್ದಕ್ಕೆ ಅಂದು ಸಾಯಂಕಾಲ ಮನೆಯಿಂದ ಹೊರ ಹೋದವನು ಮರಳಿ ಮನೆಗೆ ಬಂದಿಲ್ಲ. ಎಲ್ಲೆಡೆ ಹುಡುಕಾಡಿದರೂ ಸೂರಜ್ ಪತ್ತೆಯಾಗಿಲ್ಲ. ತಮ್ಮ ಮಗನನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದು ಬಾಲಕನ ತಾಯಿ ಗೀತಾ ಮಡಿವಾಳ ಅವರು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ :Balasore train tragedy: ಬಾಲಸೋರ್ ತ್ರಿವಳಿ ರೈಲು ದುರಂತಕ್ಕೆ 'ಮಾನವ ಲೋಪ'ವೇ ಕಾರಣ!- ತನಿಖಾ ವರದಿ