ಕರ್ನಾಟಕ

karnataka

ಯಾನಗುಂದಿಯ ಮಾತಾ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯ

ಕಳೆದ ಕೆಲ ತಿಂಗಳಿನಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮಾತಾ ಮಾಣಿಕೇಶ್ವರಿ ಅಮ್ಮನವರು ಲಿಂಗೈಕ್ಯರಾಗಿದ್ದಾರೆ.

By

Published : Mar 7, 2020, 11:24 PM IST

Published : Mar 7, 2020, 11:24 PM IST

matha manikeshwari amma died
ಮಾತಾ ಮಾಣಿಕೇಶ್ವರಿ

ಕಲಬುರಗಿ: ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದ ಸೇಡಂ ತಾಲೂಕಿನ ಯಾನಗುಂದಿಯ ಮಾತಾ ಮಾಣಿಕೇಶ್ವರಿ (87) ಲಿಂಗೈಕ್ಯರಾಗಿದ್ದಾರೆ.

ಕಳೆದ ಕೆಲ ತಿಂಗಳಿನಿಂದ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಮಾಣಿಕೇಶ್ವರಿ ಅಮ್ಮನವರಿಗೆ ಮಠದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗಷ್ಟೇ ಶಿವರಾತ್ರಿ ದಿನದಂದು ಮಲಗಿದ್ದ ಸ್ಥಿತಿಯಲ್ಲಿಯೇ ಭಕ್ತರಿಗೆ ದರ್ಶನ ನೀಡಿದ್ದರು. ಆದ್ರೆ ಪ್ರತಿ ವರ್ಷ ಶಿವರಾತ್ರಿಯಂದು ಭಕ್ತರಿಗೆ ಸಂದೇಶ ನೀಡುತ್ತಿದ್ದ ಮಾಣಿಕೇಶ್ವರಿ ಅಮ್ಮ ಅನಾರೋಗ್ಯದ ಹಿನ್ನೆಲೆಯಲ್ಲಿ ಈ ಬಾರಿ ಭಕ್ತರಿಗೆ ಯಾವುದೇ ಸಂದೇಶ ನೀಡಿರಲಿಲ್ಲ.

ಮಾತಾ ಮಾಣಿಕೇಶ್ವರಿ ಅಮ್ಮನವರು

ಮಾಣಿಕಗಿರಿಯಲ್ಲಿ ವಾಸ ಮಾಡಿಕೊಂಡು ತಪಸ್ಸು ಮಾಡುತ್ತಿದ್ದ ಅಮ್ಮನವರು ಭಕ್ತರ ಪಾಲಿಗೆ ದೇವತೆಯಾಗಿದ್ದರು. ಕರ್ನಾಟಕ, ತೆಲಂಗಾಣ, ಆಂಧ್ರ ಸೇರಿದಂತೆ ದೇಶದ ಮೂಲೆ ಮೂಲೆಗಳಲ್ಲಿ ಭಕ್ತರ ಆಶಾಕಿರಣವಾಗಿದ್ದ ಮಾಣಿಕೇಶ್ವರಿ ಅಮ್ಮನವರು ಇಂದು ಅಸ್ತಂಗತರಾಗಿದ್ದಾರೆ‌.

ದೇಶದ ವಿವಿಧೆಡೆ ಮಾಣಿಕೇಶ್ವರಿ ಹೆಸರಲ್ಲಿ ನೂರಾರು ಮಠಗಳು ಇದ್ದು, ಎನ್.ಧರ್ಮಸಿಂಗ್ ಸಿಎಂ ಆದ ನಂತರ ಭೇಟಿಗೆ ಬಂದಾಗ ಸಂಜೆವರೆಗೂ ಕಾಯಿಸಿದ್ದರು. ಕಳೆದ ಲೋಕಸಭಾ ಚುನಾವಣೆ ವೇಳೆ ಅಮಿತ್ ಶಾ ಅವರಿಗೂ ದರ್ಶನ ನೀಡಿರಲಿಲ್ಲ. ತಮ್ಮ ಮನಸ್ಸಿಗೆ ಬಂದರಷ್ಟೇ ದರ್ಶನ ಭಾಗ್ಯ ಕಲ್ಪಿಸುತ್ತಿದ್ದ ಮಾಣಿಕೇಶ್ವರಿ ಅಮ್ಮನವರು, ನುಡಿದದ್ದು ನಡೆಯುತ್ತದೆ ಎಂಬ ನಂಬಿಕೆ ಭಕ್ತರದ್ದಾಗಿತ್ತು.

ಅಮ್ಮನವರ ಅಸ್ತಂಗತ ಸುದ್ದಿ ಹರಡುತ್ತಿದ್ದಂತೆ ಮಾಣಿಕಗಿರಿ ಕಡೆ ಭಕ್ತ ಸಮೂಹ ದೌಡಾಯಿಸುತ್ತಿದೆ. ಮಾಣಿಕಗಿರಿಯಲ್ಲಿ ಭಕ್ತರ ರೋದನ ಮುಗಿಲು ಮುಟ್ಟಿದೆ. ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಸಹ ಯಾನಗುಂದಿಗೆ ಭೇಟಿ ನೀಡಿದ್ದು, ಮಾಣಿಕೇಶ್ವರಿ ಅಮ್ಮನವರ ಅಂತ್ಯಕ್ರಿಯೆ ಯಾವಾಗ ಅಂತ ಟ್ರಸ್ಟ್ ಹಾಗೂ ಭಕ್ತರ ಜೊತೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳುವದಾಗಿ ತಿಳಿಸಿದ್ದಾರೆ.

ಎರಡು-ಮೂರು ದಿನ ಭಕ್ತರ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡುವ ಚಿಂತನೆ ನಡೆದಿದೆ. ಮಂಗಳವಾರ ಅಥವಾ ಬುಧವಾರ ಮಾಣಿಕೇಶ್ವರಿ ಅಮ್ಮನವರ ಅಂತ್ಯಕ್ರಿಯೆ ನಡೆಯೋ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿರರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ಶಾಸಕ ರಾಜಕುಮಾರ್ ಪಾಟೀಲ್ ತೇಲ್ಕೂರ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details