ಕರ್ನಾಟಕ

karnataka

ETV Bharat / state

ಕಿಡ್ನಿಯನ್ನೇ ಕೊಟ್ಟು ಪತಿಯನ್ನು ಉಳಿಸಿಕೊಳ್ಳಲು ಮುಂದಾದ ಮಹಿಳೆ: ಬಡ ಕುಟುಂಬಕ್ಕೆ ಬೇಕಿದೆ ದಾನಿಗಳ ಸಹಾಯ

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಕಲಬುರಗಿಯ ವಿಜಯನಗರ ಕಾಲೋನಿಯ ನಿವಾಸಿಯೊಬ್ಬರಿಗೆ ಪತ್ನಿ ಕಿಡ್ನಿ ನೀಡಲು ಮುಂದಾಗಿದ್ದು, ಆಸ್ಪತ್ರೆ ಖರ್ಚಿಗಾಗಿ ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾರೆ.

By

Published : Feb 19, 2021, 8:43 PM IST

Kalburgi woman is ready to give Kidney to her Husband
ಕಿಡ್ನಿಯನ್ನೇ ಕೊಟ್ಟು ಪತಿಯನ್ನು ಉಳಿಸಿಕೊಳ್ಳಲು ಮುಂದಾದ ಮಹಿಳೆ

ಕಲಬುರಗಿ:ಕಿಡ್ನಿ ವೈಫಲ್ಯದಿಂದ ಜೀವನ್ಮರಣದ ಮಧ್ಯೆ ಹೋರಾಟ ನಡೆಸುತ್ತಿರುವ ಗಂಡನಿಗೆ ತನ್ನ ಕಿಡ್ನಿಯನ್ನು ಕೊಟ್ಟು ಉಳಿಸಿಕೊಳ್ಳಲು ಮಹಿಳೆಯೊಬ್ಬಳು ಮುಂದಾಗಿದ್ದಾಳೆ.

ನಗರದ ವಿಜಯನಗರ ಕಾಲೋನಿಯ ನಿವಾಸಿ, ಮೂಲತಃ ಆಳಂದ ತಾಲೂಕು ದೇಗಾಂವ್​ನವರಾದ ಸಿದ್ದಾರೂಢ ಕಿಡ್ನಿ ವೈಫಲ್ಯದಿಂದ ಹಾಸಿಗೆ ಹಿಡಿದಿದ್ದಾನೆ. ಕಳೆದ ಏಳು ವರ್ಷಗಳ ಹಿಂದೆ ರಾಣಿ ಎಂಬುವರನ್ನು ವಿವಾಹವಾದ ಸಿದ್ದಾರೂಢ, ಕಲಬುರಗಿಯ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡಿಕೊಂಡು ಹೆಂಡತಿ ಮತ್ತು ಮಗುವಿನ ಜೊತೆ ಸುಖ ಸಂಸಾರ ನಡೆಸುತ್ತಿದ್ದ. ಕಳೆದ ಒಂದು ವರ್ಷದ ಹಿಂದೆ ಸಿದ್ದಾರೂಢನಿಗೆ ಏಕಾಏಕಿ ಜ್ವರ ಕಾಣಿಸಿಕೊಂಡಿತ್ತು. ಈ ವೇಳೆ ವೈದ್ಯರನ್ನು ಭೇಟಿಯಾದಾಗ ಸಿದ್ದಾರೂಢನ ಎರಡೂ ಕಿಡ್ನಿಗಳು ಫೇಲ್ ಆಗಿರುವ ವಿಚಾರ ಬೆಳಕಿಗೆ ಬಂದಿದೆ. ಕಿಡ್ನಿ ವೈಫಲ್ಯವಾದ ಬಳಿಕ ಪೆಟ್ರೋಲ್ ಬಂಕ್​ನಲ್ಲಿ ಕೆಲಸ ಮುಂದುವರೆಸಲಾಗದೆ ಸಿದ್ದಾರೂಢ ಮನೆಯಲ್ಲೇ ಉಳಿದುಕೊಂಡು ಬಿಟ್ಟ.

ಒಂದು ವರ್ಷದ ನಡುವೆ ಹತ್ತಾರು ಕಡೆ ಸಾಲ ಸೂಲ ಮಾಡಿ ಸಿದ್ದಾರೂಢನಿಗೆ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಇದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ಹಣ ಖರ್ಚಾಯಿತೆ ಹೊರತು ಸಿದ್ದಾರೂಢನ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ. ಹೀಗಾಗಿ ಹೇಗಾದರು ಮಾಡಿ ಗಂಡನನ್ನು ಉಳಿಸಿಕೊಳ್ಳಬೇಕು ಎಂದುಕೊಂಡಿರುವ ಪತ್ನಿ ರಾಣಿ, ತನ್ನ ಒಂದು ಕಿಡ್ನಿಯನ್ನೇ ಗಂಡನಿಗೆ ನೀಡಲು ಮುಂದಾಗಿದ್ದಾಳೆ.

ಕಿಡ್ನಿಯನ್ನೇ ಕೊಟ್ಟು ಪತಿಯನ್ನು ಉಳಿಸಿಕೊಳ್ಳಲು ಮುಂದಾದ ಮಹಿಳೆ

ಪತ್ನಿ ರಾಣಿ, ಸಿದ್ದಾರೂಢನಿಗೆ ಕಿಡ್ನಿ ನೀಡಿದರೂ ಕೂಡ ಆಸ್ಪತ್ರೆ ಖರ್ಚಿಗಾಗಿ ಬರೋಬ್ಬರಿ 20 ಲಕ್ಷ ರೂ. ಬೇಕಾಗಿದೆ. ಹೀಗಾಗಿ ಇಷ್ಟೊಂದು ದೊಡ್ಡ ಮೊತ್ತವನ್ನು ಹೊಂದಿಸುವುದು ರಾಣಿಗೆ ಸವಾಲಾಗಿದ್ದು, ದಾನಿಗಳ ಸಹಾಯದ ನಿರೀಕ್ಷೆಯಲ್ಲಿದ್ದಾಳೆ. ಯಾರಾದರೂ ದಾನಿಗಳು ಸಹಾಯ ಮಾಡಿದರೆ ಬಡ ಕುಟುಂಬವೊಂದರ ಕಣ್ಣೀರು ಒರೆಸಬಹುದಾಗಿದೆ.

ಸಹಾಯ ಮಾಡಲು ಇಚ್ಛಿಸುವವರು ರಾಣಿ ಸಿದ್ದಾರೂಢ, ಬ್ಯಾಂಕ್ ಖಾತೆ ಸಂಖ್ಯೆ:0192000100152038ಕ್ಕೆ ಹಣ ವರ್ಗಾಯಿಸಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದರೆ ಸಿದ್ದಾರೂಢನ ಮೊಬೈಲ್ ಸಂಖ್ಯೆ 9663996413ಕ್ಕೆ ಕರೆ ಮಾಡಬಹುದು.

ABOUT THE AUTHOR

...view details