ಕಲಬುರಗಿ:ಸತತ ಬರಗಾಲದಿಂದ ಜಿಲ್ಲೆಯ ರೈತರು ತತ್ತರಿಸಿ ಹೋಗಿದ್ದರು. ಆದ್ರೆ ಈ ವರ್ಷ ಸುರಿದ ಉತ್ತಮ ಮಳೆಯಿಂದ ಬೆಳೆ ಕೂಡ ಸಮೃದ್ಧಿಯಾಗಿ ಬಂದಿತ್ತು. ಆದ್ರೀಗ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ ರೈತರ ಬದುಕಿನ ಫಸಲನ್ನು ಹಾಳು ಮಾಡಿದೆ.
ಜಮೀನಿಗೆ ನೀರು ನುಗ್ಗಿ ಹಾನಿಯಾಗಿರುವ ಬೆಳೆಗಳು ಭರಪೂರ ಫಸಲಿನ ನಿರೀಕ್ಷೆಯಲ್ಲಿದ್ದ ಅನ್ನಾದಾತರು ಸಂಕಷ್ಟಕ್ಕೆ ಸಿಲುಕಿ ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿಯನ್ನು ಮಳೆ ತಂದೊಡ್ಡಿದೆ. ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ನಿರಂತರವಾಗಿ ಸುರಿಯುತ್ತಿರುವ ವರ್ಷಧಾರೆಗೆ ಕೆರೆ-ಕಟ್ಟೆಗಳು, ಹಳ್ಳ- ಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಅಪಾರ ಪ್ರಮಾಣದ ನೀರು ಹೊಲ-ಗದ್ದೆಗಳಿಗೆ ನುಗ್ಗಿ ರೈತರ ಬೆಳೆ ಕೊಚ್ಚಿ ಹೋಗಿದೆ.
ತಗ್ಗು ಪ್ರದೇಶದ ಜಮೀನುಗಳಲ್ಲಿ ಸುಮಾರು 2ರಿಂದ 3 ಅಡಿಯಷ್ಟು ಮಳೆ ನೀರು ಸಂಗ್ರಹವಾಗಿ ಫಸಲು ಕಟ್ಟುತ್ತಿದ್ದ ಉದ್ದು, ಹೆಸರು, ತೊಗರಿ, ಶೇಂಗಾ, ಏಳ್ಳು ಬೆಳೆಗಳು ನೀರಿನಲ್ಲಿ ಕೊಳೆಯಲಾರಂಭಿಸಿವೆ. ಸಾವಿರಾರು ರೂ. ಖರ್ಚು ಮಾಡಿ ಬಿತ್ತನೆ ಮಾಡಿರುವ ಅನ್ನದಾತರು ವರುಣಾಘಾತಕ್ಕೆ ಕಂಗಾಲಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆ ಕಳೆದುಕೊಂಡು ಕಂಗಾಲಾಗಿರುವ ರೈತರು ಪರಿಹಾರಕ್ಕಾಗಿ ಸರ್ಕಾರದತ್ತ ಮುಖ ಮಾಡಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಸತತ ಎರಡು ದಿನ ಸುರಿದ ಭಾರೀ ಮಳೆ ಸಾಕಷ್ಟು ಅವಾಂತರ ಸೃಷ್ಟಿಸಿತ್ತು. ಜಿಲ್ಲೆಯ ಬಹುತೇಕ ರೈತರು ಬೆಳೆ ಕಳೆದುಕೊಂಡು ಅಕ್ಷರಶಃ ಕಂಗಾಲಾಗಿದ್ದರು. ಉಳಿದ ಬೆಳೆಯಾದ್ರೂ ಕೈಗೆ ತಲುಪಬಹುದು ಅನ್ನೋ ಆಶಾಭಾವನೆಯಲ್ಲಿದ್ದ ರೈತರಿಗೆ ಈ ಜಡಿ ಮಳೆ ಗಾಯದ ಮೇಲೆ ಮತ್ತೆ ಬರೆ ಎಳೆದಿದೆ.
ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ಜೂನ್ ತಿಂಗಳಿಂದ ಆಗಸ್ಟ್ವರೆಗೆ ಅತಿವೃಷ್ಟಿಗೆ ಜಿಲ್ಲೆಯಲ್ಲಿ ಸುಮಾರು 30 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಬೆಳೆ ಹಾನಿ ಬಗ್ಗೆ ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸುತ್ತಿದ್ದು, ಸರ್ವೆ ಬಳಿಕ ಬೆಳೆ ಹಾನಿ ಬಗ್ಗೆ ಕಂಪ್ಲೀಟ್ ಮಾಹಿತಿ ಸಿಗಲಿದೆ. ಮಳೆಯ ಆರ್ಭಟಕ್ಕೆ ಜಿಲ್ಲೆಯ ಕಲಬುರಗಿ, ಅಫಜಲಪುರ, ಆಳಂದ, ಚಿಂಚೋಳಿ ತಾಲೂಕಿನಲ್ಲಿ ಬೆಳೆ ಹಾನಿಯಾಗಿದೆ. ಸಾಲ ಮಾಡಿಕೊಂಡಿರುವ ಅನ್ನದಾತರು ಸರ್ಕಾರ ಶೀಘ್ರ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ.