ಕಲಬುರಗಿ: ರಾಜ್ಯಾದ್ಯಂತ ತೀವ್ರ ಬರಗಾಲವಿದ್ದರೂ ಅದರ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ತಮ್ಮ ವೈಫಲ್ಯ ಮುಚ್ಚಿ ಹಾಕಿಕೊಳ್ಳಲು ಸಿಎಂ ಗ್ರಾಮ ವಾಸ್ತವ್ಯ ಡ್ರಾಮಾ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಹೆಚ್ಡಿಕೆ ಗ್ರಾಮ ವಾಸ್ತವ್ಯದ ಡ್ರಾಮಾ ಮಾಡುತ್ತಿದ್ದಾರೆ: ಶೆಟ್ಟರ್ ವಾಗ್ದಾಳಿ - kannadanews
ಸಿಎಂ ಕುಮಾರಸ್ವಾಮಿ ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಿಕೊಳ್ಳಲು ಗ್ರಾಮ ವಾಸ್ತವ್ಯದ ಡ್ರಾಮಾ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟೀಕೆ ಮಾಡಿದ್ದಾರೆ.
ಕಲಬುರಗಿಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದವರು ಅವರು, ಈ ಹಿಂದೆ ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ ಗ್ರಾಮಗಳಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಹಿಂದೆ ಗ್ರಾಮ ವಾಸ್ತವ್ಯ ಮಾಡಿದ ಕಡೆ ಯಾವ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಅಂತಾ ಶ್ವೇತಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು. ಹೈಡ್ರಾಮಾ ಮಾಡೋದನ್ನು ನಿಲ್ಲಿಸಿ, ನಿಜವಾದ ಕಾಳಜಿ ಇದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಮಾಡಿ ಸಮಸ್ಯೆ ಬಗೆಹರಿಸಲಿ ಎಂದರು.
ಇನ್ನು ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಸರ್ಕಾರಕ್ಕೆ ಸೋಲಾಗಿದೆ. ನೈತಿಕತೆಯಿದ್ದಲ್ಲಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕಿತ್ತು. ಕುಮಾರಸ್ವಾಮಿ ಸಿಎಂ ಆದಾಗಿನಿಂದಲೂ ರಾಜ್ಯದಲ್ಲಿ ಅತಂತ್ರ ಸ್ಥಿತಿ ಇದೆ. ಚುನಾವಣಾ ಸೋಲಿನ ನಂತರ ಒಬ್ಬರಿಗೊಬ್ಬರು ಚೂರಿ ಹಾಕಿಕೊಳ್ಳುತ್ತಿದ್ದಾರೆ. ಯಾವಾಗ ಬೇಕಾದ್ರೂ ಸಮ್ಮಿಶ್ರ ಸರ್ಕಾರ ಪತನವಾಗಬಹುದು. ರಾಜ್ಯದಲ್ಲಿ ಕಾಂಗ್ರೆಸ್ ದಿನದಿಂದ ದಿನಕ್ಕೆ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಹೀಗಾಗಿ ಜನ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ತಿರಸ್ಕರಿಸೋ ಮೊದಲು ಕಾಂಗ್ರೆಸ್ ನಾಯಕರೇ ಪಕ್ಷವನ್ನು ವಿಸರ್ಜಿಸಲಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.