ಕಲಬುರಗಿ:ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದಲೂ ಕೊರೊನಾ ಅಟ್ಟಹಾಸ ಮರೆದಿತ್ತು. ಈ ಹಿನ್ನೆಲೆ ಲಾಕ್ಡೌನ್ ಜಾರಿಯಾಗಿ ಕಠಿಣ ನಿರ್ಬಂಧಗಳ ನಡುವೆ ಇದೀಗ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆಯಾಗಿದ್ದು, ನಾಳೆಯಿಂದ ಜಿಲ್ಲೆಯಲ್ಲಿ ಅನ್ಲಾಕ್ ಪ್ರಕ್ರಿಯೆ ಜಾರಿಯಾಗಲಿದೆ.
ಕೊರೊನಾ ಸೋಂಕಿತರ ಸಂಖ್ಯೆ ನಾಲ್ಕಂಕಿಯಿಂದ ಎರಡಂಕಿಗೆ ಇಳಿಮುಖವಾಗಿದೆ. ಈ ಹಿಂದೆ ಸೋಂಕಿತರ ಸಂಖ್ಯೆ 2 ಸಾವಿರ ಗಡಿ ತಲುಪಿತ್ತು, ಈಗ ನಿತ್ಯ 20ರ ಆಸುಪಾಸಿನಲ್ಲಿ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಸಾವಿನ ಸಂಖ್ಯೆಯಲ್ಲಿಯೂ ಇಳಿಕೆಯಾಗಿದ್ದು, ಈ ಹಿಂದೆ ನಿತ್ಯ 20 ಮಂದಿ ಸೋಂಕಿತರು ಸಾವನ್ನಪ್ಪುತ್ತಿದ್ದರು. ಆದರೆ ಕೆಲ ದಿನಗಳಿಂದ ಜಿಲ್ಲೆಯಲ್ಲಿ ಒಂದೇ ಒಂದು ಸಾವಿನ ಪ್ರಕರಣ ದಾಖಲಾಗಿಲ್ಲ.
ಈ ಹಿನ್ನೆಲೆ ನಾಳೆಯಿಂದ ಅನ್ಲಾಕ್ ಪ್ರಕ್ರಿಯೆ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ಪಂಜರದ ಗಿಳಿಯಂತಾಗಿದ್ದ ಜನರಿಗೆ ಮುಕ್ತಿ ಸಿಕ್ಕಂತಾಗುತ್ತದೆ.
ನಾಳೆಯಿಂದ ಜಿಲ್ಲೆಯಲ್ಲಿ 200 ಬಸ್ ಸಂಚಾರ..
ಅನ್ಲಾಕ್ ಹಿನ್ನೆಲೆ ನಾಳೆಯಿಂದ ಕಲಬುರಗಿಯಲ್ಲಿ ಶೇ.50ರಷ್ಟು ಸಾರಿಗೆ ಸಂಚಾರ ಆರಂಭಿಸುವುದು ಖಚಿತವಾಗಿದೆ. ಜಿಲ್ಲೆಯಿಂದ ಸುಮಾರು 200 ಬಸ್ಗಳ ಸಂಚಾರ ಪ್ರಾರಂಭವಾಗಲಿದೆ. ಗ್ರಾಮಗಳು, ತಾಲೂಕುಗಳಿಗೆ, ಹಾಗೂ ಅನ್ಯ ಜಿಲ್ಲೆಗಳಿಗೆ ಬಸ್ ಸಂಚಾರ ಮಾಡಲಿವೆ. ಅಂತರ ಕಾಯ್ದುಕೊಂಡು ಪ್ರಯಾಣಿಕರು ಸಂಚಾರ ಮಾಡಬಹುದಾಗಿದೆ. ಈಗಾಗಲೇ ಸೇವೆಗೆ ಹಾಜರಾಗುವ ಚಾಲಕ, ಹಾಗೂ ನಿರ್ವಾಹಕರಿಗೆ RTPCR ರಿಪೋರ್ಟ್ ಕಡ್ಡಾಯಗೊಳಿಸಲಾಗಿದ್ದು, ನೆಗೆಟಿವ್ ಇದ್ದವರಿಗೆ ಸೋಮವಾರ ಸೇವೆಗೆ ಹಾಜರಾಗಲು ಅವಕಾಶ ನೀಡಲಾಗಿದೆ. ಈಗಾಗಲೇ ಬಸ್ ಹಾಗೂ ಬಸ್ ನಿಲ್ದಾಣ ಸ್ವಚ್ಛ ಮಾಡಲಾಗುತ್ತಿದೆ.