ಕಲಬುರಗಿ:ಕಳೆದ ನಾಲ್ಕು ತಿಂಗಳಿಂದ ರಾಜ್ಯದಲ್ಲಿ ಕೋಮು ಸಂಘರ್ಷಗಳು ಹೆಚ್ಚುತ್ತಿವೆ. ಅದಕ್ಕೆ ಕಡಿವಾಣ ಹಾಕಬೇಕಿರುವ ಸರ್ಕಾರ ಜಾತಿ ಹೆಸರಿನ ಮೇಲೆ ರಾಜಕಾರಣ ಮಾಡುತ್ತಿದೆ. ಹಿಂದೂಗಳ ಹೆಸರಿನಲ್ಲಿ ಬಿಜೆಪಿ ರಾಜಕೀಯ ಮಾಡುತ್ತ ನಾಡನ್ನು ನಿರ್ನಾಮ ಮಾಡಲು ಹೊರಟಿದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ನಗರದ ಜೆಡಿಎಸ್ ಪಕ್ಷದ ಕಚೇರಿ ಆವರಣದಲ್ಲಿ ನಡೆದ ಕಲಬುರಗಿ ದಕ್ಷಿಣ ಮತಕ್ಷೇತ್ರದ ಬೃಹತ್ ಸಮಾವೇಶದಲ್ಲಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ಮಂಗಳೂರಿನಲ್ಲಿ ಸರಣಿ ಕೊಲೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಕೇವಲ ಒಂದು ವರ್ಗದ ವ್ಯಕ್ತಿಯ ಮನೆಗೆ ಮಾತ್ರ ಭೇಟಿ ಕೊಟ್ಟಿದ್ದಾರೆ. ಕೊಲೆಯಾದ ಇನ್ನೊಂದು ವರ್ಗದ ಯುವಕನ ಮನೆಗೂ ಹೋಗಿಲ್ಲ, ವಿಚಾರಣೆ ಮಾಡಿಲ್ಲ. ಅವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿಲ್ಲ. ಬಿಜೆಪಿ ಸರ್ಕಾರ ಕೇವಲ ಒಂದು ವರ್ಗದ ಜನರ ರಕ್ಷಣೆಗಾಗಿ ಇದೆಯಾ ಎಂದು ಪ್ರಶ್ನೆ ಮಾಡಿದರು.
ತಮ್ಮ ಆಸೆಗಾಗಿ ಜನರ ಬಲಿ:ಬಿಜೆಪಿಯವರುಕೇವಲ ತಮ್ಮ ಆಸೆಗಾಗಿ ಜನರನ್ನು ಬಲಿಕೊಡುತ್ತಿದ್ದಾರೆ. ಇದು ಸರ್ಕಾರದ ಅನಾಗರಿಕ ರಾಜಕಾರಣಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಹಿಂದುತ್ವದ ಮೂಲಕ ನಿಮ್ಮನ್ನು (ಜನರನ್ನು) ಮರಳು ಮಾಡಿ ಅಧಿಕಾರ ಹಿಡಿದು, ನಿಮ್ಮನ್ನೇ (ಜನರನ್ನೇ) ಗುಲಾಮರನ್ನಾಗಿ ಮಾಡುತ್ತಿದ್ದಾರೆ. ನಿಮ್ಮ ಬದುಕನ್ನು ಹಾಳು ಮಾಡಲು ಇಂತಹ ಸರ್ಕಾರಗಳು ಬೇಕಾ?. ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸುವುದು ಅವಶ್ಯಕವಾಗಿದೆ ಎಂದು ಹೆಚ್ಡಿಕೆ ಕರೆ ನೀಡಿದರು.
ಜನರಿಗಾಗಿ ಯೋಜನೆಗಳನ್ನು ಕೊಟ್ಟೆ:ಈಗಿನ ಬಿಜೆಪಿ ಸರ್ಕಾರದ ಶೇ.40ರಷ್ಟು ಕಮಿಷನ್ ಸರ್ಕಾರ ಅಂತಾ ಹೇಳಲಾಗುತ್ತಿದೆ. ಆ ರೀತಿ ನಾನೂ ಮಾಡಿದ್ದರೆ ಹತ್ತು ಸಾವಿರ ಕೋಟಿ ಗಳಿಸುತ್ತಿದ್ದೆ. ಆದರೆ, ನಾನು ಜನರಿಗಾಗಿ ಯೋಜನೆಗಳನ್ನು ಕೊಟ್ಟಿದ್ದೇನೆ. ರಾಜ್ಯದ ಎಲ್ಲರೂ ನನ್ನ ಅಣ್ಣ-ತಮ್ಮಂದಿರೂ ಎಲ್ಲರ ಮೈಯಲ್ಲಿ ಹರಿತಿರೋದು ಕೆಂಪು ರಕ್ತ. ಬಿಜೆಪಿ ಸರ್ಕಾರ ಅನಾಗರಿಕ ಸರ್ಕಾರ. ನಮ್ಮದೂ ತಾಯಿ ಹೃದಯದ ಪಕ್ಷ. ನಿಮಗೆ ಅನಾಗರಿಕ ಸರ್ಕಾರ ಬೇಕೋ, ತಾಯಿ ಹೃದಯ ಸರ್ಕಾರ ಬೇಕೋ?. ನೀವೇ ನಿರ್ಧಾರ ಮಾಡಿ ಎಂದ ಕುಮಾರಸ್ವಾಮಿ ಅವರು, ಜಾತಿ ಹೆಸರಿನ ವ್ಯಾಮೋಹಕ್ಕೆ ಒಳಗಾಗಬೇಡಿ. ನಿಮ್ಮ ಹೆಸರಿನಲ್ಲಿ ಅವರು ಮಜಾ ಮಾಡುತ್ತಿದ್ದಾರೆ ಎಂದರು.
ನಮಗೆ ಪೂರ್ಣ ಬಹುಮತ ಕೊಡಿ:ನನಗೆ ಐವತ್ತು ಸ್ಥಾನ ಗೆಲ್ಲೋದು ಕಷ್ಟ ಅಲ್ಲವೇ, ಅಲ್ಲ. ಆದರೆ, ಮತ್ತೊಬ್ಬರ ಬೆಂಬಲದಿಂದ ಸರ್ಕಾರ ಮಾಡಿದರೆ, ಅವರ ಹಂಗಿನಲ್ಲೇ ಆಡಳಿತ ನಡೆಸಬೇಕಾಗುತ್ತದೆ. ನಮ್ಮ ಪಕ್ಷವನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತನ್ನಿ. ಬಿಜೆಪಿ, ಕಾಂಗ್ರೆಸ್ನಂತೆ ಹೆಣದ ಮೇಲೆ ರಾಜಕೀಯ ಮಾಡುವವರು ನಾವಲ್ಲ. ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಈ ಬಾರಿ ಜೆಡಿಎಸ್‌ಗೆ ಬಹುಮತ ನೀಡಿ, ಅಧಿಕಾರಕ್ಕೆ ತನ್ನಿ ಎಂದು ಕುಮಾರಸ್ವಾಮಿ ಮನವಿ ಮಾಡಿದರು.
ಖರ್ಗೆ ಸಿಎಂ ಮಾಡೋದು ಬೇಡ ಅಂದ್ರು:2018ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರಗೊಂಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದವರು ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ಈ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ರಾಜ್ಯದ ಮುಖ್ಯಮಂತ್ರಿ ಮಾಡಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದರು. ಆದರೆ, ದೆಹಲಿಯಿಂದ ಬಂದಿದ್ದ ಕಾಂಗ್ರೆಸ್ ನಾಯಕರು ಖರ್ಗೆ ಸಿಎಂ ಮಾಡೋದು ಬೇಡ ಎಂದು, ನನ್ನನ್ನು ಸಿಎಂ ಮಾಡಿದರು. ಖರ್ಗೆಯವರಿಗೆ ಮುಖ್ಯಮಂತ್ರಿ ಸ್ಥಾನ ಕೈತಪ್ಪಿಸಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯವರು ಎಂದು ಎರಡೂ ಪಕ್ಷಗಳ ವಿರುದ್ಧ ಹೆಚ್ಡಿಕೆ ಕಿಡಿಕಾರಿದರು.