ಕಲಬುರಗಿ: ಕಲಬುರಗಿ ನಗರದಲ್ಲಿ ಆಟೋ ಸಂಚಾರವು ಪ್ರಾಮುಖ್ಯತೆ ಹೊಂದಿದೆ. ಶೇ.80ರಷ್ಟು ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿರುವ ಆಟೋ ಚಾಲಕರು, ಕೊರೊನಾದಿಂದ ನಲುಗಿ ಹೋಗಿದ್ದಾರೆ. ಲಾಕ್‌ಡೌನ್ ವೇಳೆ ಆಟೋ ಚಾಲಕರು ಬೀದಿಗೆ ಬಿದ್ದು, ಮೂರು ತಿಂಗಳ ಕಾಲ ಪಡಬಾರದ ಕಷ್ಟ ಪಟ್ಟಿದ್ದಾರೆ.
ಇದೀಗ ಲಾಕ್‌ಡೌನ್ ಸಡಿಲಿಕೆ ಬಳಿಕ ಎಲ್ಲಾ ವ್ಯಾಪಾರ ವಹಿವಾಟುಗಳು ಯಥಾಸ್ಥಿತಿಗೆ ಮರಳುತ್ತಿವೆ. ಆದರೆ ಸಾಮಾಜಿಕ ಅಂತರ ಅಗತ್ಯವಿರುವ ಕಾರಣ ಆಟೋಗಳಲ್ಲಿ ಪ್ರಯಾಣ ಬೆಳೆಸಲು ಸಾರ್ವಜನಿಕರು ಇಂದಿಗೂ ಹಿಂದೇಟು ಹಾಕುತ್ತಿದ್ದಾರೆ. ಈ ಮುಂಚೆ ಆರರಿಂದ ಏಳು ನೂರು ರೂಪಾಯಿ ಸಂಪಾದನೆ ಮಾಡುತ್ತಿದ್ದ ಚಾಲಕರು, ಇದೀಗ ಕೇವಲ 300 ರಿಂದ 400 ರೂ. ಸಂಪಾದನೆ ಮಾಡುತ್ತಿದ್ದಾರೆ.
ಇದರಿಂದಾಗಿ ಒಂದಡೆ ಕುಟುಂಬ ನಿರ್ವಹಣೆ ಕಷ್ಟವಾದರೆ, ಇನ್ನೊಂದೆಡೆ ಆಟೋ ಖರೀದಿಸಲು ಮಾಡಿದ ಸಾಲ ಹಾಗೂ ಲಾಕ್‌ಡೌನ್ ವೇಳೆ ಮಾಡಿಕೊಂಡ ಕೈಸಾಲ ತೀರಿಸಲು ಆಗದೆ, ಆಟೋ ಚಾಲಕರು ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ.
ಲಾಕ್ ಡೌನ್ ಸಡಿಲಗೊಂಡರೂ ಮುಗಿಯದ ಚಾಲಕರ ಗೋಳು ತಿಂಗಳಿಗೆ ಹತ್ತು ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿರುವ ಇವರು, ಆಟೋ ಮೆಂಟೇನೆನ್ಸ್ ಹಾಗೂ ಇನ್ಸೂರೆನ್ಸ್ ಸೇರಿ ತಿಂಗಳಿಗೆ 2 ಸಾವಿರ ಖರ್ಚು ಮಾಡ್ತಾರೆ. ಉಳಿದಿರುವ 8 ಸಾವಿರದಲ್ಲಿ 6,500 ರೂಪಾಯಿ ಅಟೋ ಇಎಮ್ಐಗೆ ಹಾಕ್ತಾರೆ. ಎಲ್ಲ ಕಳೆದು ಇವರ ಕೈಯಲ್ಲಿ ಉಳಿಯುವುದು ಕೇವಲ ಸಾವಿರದ ಐದು ನೂರು ರೂಪಾಯಿ ಮಾತ್ರ. ಇಷ್ಟರಲ್ಲಿಯೇ ಕುಟುಂಬ ನಿರ್ವಹಣೆ ಮಾಡುವುದು ದುಸ್ತರವಾಗಿದೆ ಅನ್ನೋದು ಬಡಪಾಯಿ ಆಟೋ ಚಾಲಕರ ಅಳಲು.
ಲಾಕ್‌ಡೌನ್ ಸಂದರ್ಭದಲ್ಲಿ ಆಟೋ ಚಾಲಕರಿಗೆ ರಾಜ್ಯ ಸರ್ಕಾರ, ತಲಾ 5 ಸಾವಿರ ರೂ. ನೀಡುವುದಾಗಿ ಘೋಷಣೆ ಮಾಡಿತ್ತು. ಶೇ. 60 ಚಾಲಕರು ಇದರ ಲಾಭ ಕೂಡ ಪಡೆದಿದ್ದಾರೆ. ಆದರೆ ಶೇ. 40 ರಷ್ಟು ಆಟೋ ಚಾಲಕರಿಗೆ ಈ ಹಣ ಕೂಡ ಕೈ ಹತ್ತಿಲ್ಲ. ಪ್ರತಿಯೊಂದರ ಬೆಲೆ ದುಬಾರಿಯಾಗಿದ್ದು, ಅತಿ ಕಡಿಮೆ ಸಂಪಾದನೆಯಲ್ಲಿ ಜೀವನ ನಡೆಸುವುದು ಹೇಗೆ ಎಂದು ಆಟೋ ಚಾಲಕರು ಕಂಗಾಲಾಗಿದ್ದಾರೆ.
ಆಟೋ ಇಎಮ್ಐ ಕಡಿತ ಮತ್ತು ಒಂದಿಷ್ಟು ಸಾಲ ಸೌಲಭ್ಯ ನೀಡಿದ್ರೆ ಜೀವನ ಕಟ್ಟಿಕೊಳ್ಳಬಹುದು. ಸರ್ಕಾರ ನಮಗೂ ಬದುಕಲು ವ್ಯವಸ್ಥೆ ಮಾಡಿಕೊಡಲಿ ಎನ್ನೋದು ಚಾಲಕರ ಅಳಲಾಗಿದೆ.