ರಾಣೆಬೆನ್ನೂರು(ಹಾವೇರಿ): ನಗರದ ಬಹುನೀರಿಕ್ಷಿತ 24x7 ಕುಡಿಯುವ ನೀರಿನ ಅಮೃತ ಯೋಜನೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂಬ ಕೂಗು ನಗರಸಭಾ ಸದಸ್ಯರಿಂದಲೇ ಕೇಳಿ ಬಂದಿದೆ.
ರಾಣೆಬೆನ್ನೂರು ನಗರಕ್ಕೆ ಕುಡಿಯುವ ನೀರಿನ ಸಲುವಾಗಿ ಕೇಂದ್ರ, ರಾಜ್ಯ ಹಾಗೂ ನಗರಸಭೆ ವತಿಯಿಂದ ಅಮೃತ ಯೋಜನೆಯಡಿ 118.60 ಕೋಟಿ ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಈ ಕಾಮಗಾರಿಗೆ 2017ರಲ್ಲಿ ಅಂದಿನ ಶಾಸಕ ಕೆ ಬಿ ಕೋಳಿವಾಡರು ಮತ್ತು ಸಂಸದ ಶಿವಕುಮಾರ ಉದಾಸಿಯವರು ಚಾಲನೆ ನೀಡಿದ್ದರು. ಅಂದಿನಿಂದ ಈವರೆಗೂ ಕಾಮಗಾರಿ ನಡೆಯುತ್ತಿದೆ. ಈ ನಡುವೆ ನಗರಸಭಾ ಸದಸ್ಯರೇ ಕಾಮಗಾರಿ ಕಳಪೆಯಾಗಿದೆ ಎಂದು ದನಿ ಎತ್ತಿದ್ದಾರೆ.
ಯೋಜನೆ ಪ್ರಕಾರ ಕಾಮಗಾರಿಯು 2020 ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳ್ಳಬೇಕಾಗಿದೆ. ಅಲ್ಲದೆ ಡಿಸೆಂಬರ್ ತಿಂಗಳಲ್ಲಿ ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ ಇರುವುದರಿಂದ ಶಾಸಕರು ಅಂದು ಕಾಮಗಾರಿ ಉದ್ಘಾಟಿಸುವ ಸಲುವಾಗಿ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ಗಡುವು ನೀಡಿದ್ದಾರೆ. ಇದರಿಂದ ವಿವೋಲಿಯಾ ಪ್ರೈವೇಟ್ ಲಿಮಿಟೆಡ್ನ ಗುತ್ತಿಗೆದಾರರು ತರಾತುರಿಯಲ್ಲಿ ಕಾಮಗಾರಿ ಮುಗಿಸುವ ಬರದಲ್ಲಿ ಕಳಪೆ ಮಟ್ಟದ ಕಾಮಗಾರಿ ಮಾಡಿದ್ದಾರೆ ಮತ್ತು ಮಾಡಲಾಗುತ್ತಿದೆ ಎಂದು ಆರೋಪಿಸಿದರು.