ಹಾವೇರಿ: ಬೆಳೆ ಹಾನಿಯಾಗಿಲ್ಲ ಎಂದು ರಾಜ್ಯ ಸರ್ಕಾರ ಅಧಿಕಾರಗಳಿಂದ ವರದಿ ತರಿಸಿಕೊಳ್ಳುತ್ತಿದೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾಡಿರುವ ಆರೋಪಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಹಾವೇರಿ ನಗರದಲ್ಲಿ ಮಾತನಾಡಿದ ಅವರು, ಪಾಟೀಲ್ ಹೇಳಿಕೆಯಲ್ಲಿ ಪ್ರತಿಶತ 5ರಷ್ಟಾದರು ಸತ್ಯಾಂಶವಿದೆಯಾ?. ಅದರಲ್ಲಿ ಹುರುಳೇ ಇಲ್ಲ, ಅದರಲ್ಲಿ ಇರುವುದೆಲ್ಲ ಮರಳು ಎಂದು ಸಚಿವ ಕೃಷ್ಣಬೈರೇಗೌಡ ಟಾಂಗ್ ನೀಡಿದರು.
ಮಾಜಿ ಸಚಿವರ ಹೇಳಿಕೆಯಲ್ಲಿ ಸ್ವಲ್ಪವಾದರೂ ಸತ್ಯಾಂಶವಿದೆಯಾ? ಸುಮ್ಮನೆ ಹೇಳಿಕೆ ನೀಡಿದರೆ ಅದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು. ಬಿಜೆಪಿಯವರು ಕೇವಲ ಗಾಳಿಯಲ್ಲೇ ಮಾತನಾಡುತ್ತಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ರಾಜ್ಯಕ್ಕೆ ಬರಬೇಕಾದ ಪರಿಹಾರದ ಬಗ್ಗೆ ಅವರು ವಿಚಾರ ಮಾಡಬೇಕು ಎಂದು ಹೇಳಿದರು. ಇಲ್ಲಿ ಗಾಳಿಯಲ್ಲಿ ಮಾತನಾಡುವುದನ್ನ ಬಿಟ್ಟು ಕೇಂದ್ರಕ್ಕೆ ಹೋಗಿ ರಾಜ್ಯಕ್ಕೆ ಬರುವ ಪಾಲನ್ನ ತರುವ ಪ್ರಯತ್ನ ಮಾಡಿದರೆ ಅವರೂ ರಾಜ್ಯಕ್ಕೆ ನ್ಯಾಯ ಒದಗಿಸಿದಂತಾಗುತ್ತದೆ ಎಂದರು.
ರಾಜ್ಯದ ಜನ 26 ಸಂಸದರನ್ನ ಆಯ್ಕೆ ಮಾಡಿದ್ದಾರೆ. ಸಚಿವರು ಇವರ ಪಕ್ಷದವರೇ ಇದ್ದಾರೆ ಈ ಕುರಿತಂತೆ ಕೇಂದ್ರಕ್ಕೆ ಹೋಗಿ ಪರಿಹಾರದ ಬಗ್ಗೆ ಬಾಯಿಬಿಟ್ಟು ಕೇಳಲು ಆಗಲ್ಲ. ಕೇಂದ್ರದಿಂದ ಪರಿಹಾರ ಕೊಡಿಸುವುದು ಬಿಟ್ಟು ಈ ರೀತಿಯ ಹೇಳಿಕೆಗಳಿಂದ ಯಾವುದೇ ಪ್ರಯೋಜನವಿಲ್ಲ. ರಾಜ್ಯದ ಪರ ಮಾತನಾಡಲು ಧೈರ್ಯವಿಲ್ಲ. ಇದನ್ನು ಡೈವರ್ಟ್ ಮಾಡಲು ಈ ರೀತಿಯ ಇಲ್ಲ ಸಲ್ಲದ ಆರೋಪಗಳನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನಾವು ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಜೊತೆಗೆ ಕೇಂದ್ರಕ್ಕೆ ರಾಜ್ಯ ಬಿಜೆಪಿ ನಾಯಕರು ಒತ್ತಡ ಮಾಡಲಿ, ಇದು ನಮ್ಮ ರಾಜ್ಯದ ಹಕ್ಕು, ರಾಜ್ಯದ ಜನರು ಕಟ್ಟಿರುವ ತೆರಿಗೆ ಹಣವನ್ನು ನಾವು ಕೇಳುತ್ತಿದ್ದೇವೆ ಯಾವುದೇ ಉದಾರ ಕೇಳುತ್ತಿಲ್ಲಾ. ಇದು ನಮ್ಮ ಹಣ ನಮ್ಮ ಹಕ್ಕು ನಮ್ಮ ಅಧಿಕಾರ ಎಂದು ಹೇಳಿದರು.