ಹಾವೇರಿ : ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಲ್ಲಾ, ಇವಿಎಂ ಗೆಲುವು ಎಂದು ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಈ ಕುರಿತಂತೆ ವಿಶ್ಲೇಷಣೆಯಾಗಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, ಪಂಚರಾಜ್ಯ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವಲ್ಲ, ಬದಲಾಗಿ ಇವಿಎಂ ಗೆಲುವು ಎಂದು ಮಾಜಿ ಸಿಎಂ ಅಖಿಲೇಶ್ ಯಾದವ್ ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ. ಈ ಕುರಿತು ಕಾಂಗ್ರೆಸ್ ಯಾವುದೇ ಆರೋಪ ಮಾಡುವುದಿಲ್ಲ ಎಂದರು.
ನಾಲ್ಕು ರಾಜ್ಯಗಳ ಫಲಿತಾಂಶದ ನಂತರ ಕಾಂಗ್ರೆಸ್ ವರಿಷ್ಠರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಸಲೀಂ ಅಹ್ಮದ್ ಅವರು, ರಾಷ್ಟ್ರೀಯ ಮುಖಂಡರಾದ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿದ್ದಾರೆ. ಅದರ ಬದಲು ರಾಜ್ಯ ಮುಖಂಡರು ರಾಜೀನಾಮೆ ನೀಡಬೇಕು ಎಂದು ಸಲೀಂ ಅಹ್ಮದ್ ಅಭಿಪ್ರಾಯಪಟ್ಟರು. ಪಂಜಾಬ್ ಮತ್ತು ಉತ್ತರಾಖಂಡ್ ಚುನಾವಣೆಯ ಸೋಲಿಗೆ ಅಲ್ಲಿಯ ಮುಖಂಡರು ರಾಜೀನಾಮೆ ನೀಡಬೇಕೇ ಹೊರತು ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಲ್ಲ ಎಂದು ಸಲೀಂ ಅಹ್ಮದ್ ಹೇಳಿದರು. ಸೋನಿಯಾ ಗಾಂಧಿಯವರಿಗೆ ಯಾವುದೇ ಅಧಿಕಾರದ ಆಸೆಯಿಲ್ಲ ಎಂದು ತಿಳಿಸಿದರು.
ಹಾವೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಸಲೀಂ ಅಹ್ಮದ್... 2024 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ರಾಹುಲ್ ಗಾಂಧಿ ಪ್ರಧಾನಿಯಾಗಲಿದ್ದಾರೆ ಎಂದು ಸಲೀಂ ಅಹ್ಮದ್ ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಬಿಜೆಪಿಯವರು ಸಮಾಜವನ್ನ ಒಡೆದು ಅಧಿಕಾರಕ್ಕೆ ಬಂದರು ಎಂದು ಆರೋಪಿಸಿದ್ದಾರೆ. ಯುಪಿಯಲ್ಲಿ ಈ ಹಿಂದಿನ ಚುನಾವಣೆಯಲ್ಲಿ ಪಡೆದ ಸ್ಥಾನಗಳಲ್ಲಿ 47 ಸ್ಥಾನಗಳನ್ನ ಬಿಜೆಪಿ ಯಾಕೆ ಕಳೆದುಕೊಂಡಿತು ಎಂದು ಪ್ರಶ್ನಿಸಿದರು. 2023 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ, ದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬರುತ್ತದೆ ಎಂದು ಭವಿಷ್ಯ ನುಡಿದರು.
ಸಿ ಎಂ ಇಬ್ರಾಹಿಂ ರಾಜೀನಾಮೆ ಕುರಿತು ಪ್ರತಿಕ್ರಿಯಿಸಿದ ಅವರು, ಪರಿಷತ್‌ನಲ್ಲಿ ಪ್ರತಿಪಕ್ಷದ ನಾಯಕನ ಸ್ಥಾನ ಸಿಗಲಿಲ್ಲಾ ಎಂದು ಸಿಎಂ ಇಬ್ರಾಹಿಂ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್‌ಗೆ ಹೊರಟಿದ್ದಾರೆ. ಅವರ ಬದಲು ಬಿ.ಕೆ. ಪರಿಪ್ರಸಾದ್ ಗೆ ಪ್ರತಿಪಕ್ಷನಾಯಕನ ಸ್ಥಾನ ನೀಡಿದ್ದಕ್ಕೆ ಅಸಮಾಧಾನಗೊಂಡ ಇಬ್ರಾಹಿಂ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಜೆಡಿಎಸ್ ಬಿಜೆಪಿಯ ಬಿ ಟೀಂ, ಅದಕ್ಕೆ ಯಾವುದೇ ಕಾರಣಕ್ಕೂ ಇಬ್ರಾಹಿಂ ಜೆಡಿಎಸ್ ಸೇರಬಾರದು. ಈ ಮೂಲಕ ಜಾತ್ಯತೀತ ಮತಗಳನ್ನ ಒಡೆಯಬಾರದು ಎಂದು ಸಲೀಂ ಅಹ್ಮದ್ ಹೇಳಿದ್ದಾರೆ.
ಓದಿ :ಉಕ್ರೇನ್ನಲ್ಲಿ ರಷ್ಯಾ ದಾಳಿಗೆ 35 ಜನರು ಬಲಿ: ಅಮೆರಿಕದ ಪತ್ರಕರ್ತನಿಗೆ ಗುಂಡಿಟ್ಟು ಕೊಲೆ