ಹಾವೇರಿ: ರಾಣೆಬೆನ್ನೂರು ತಾಲೂಕಿನ ಹನುಮನಹಳ್ಳಿಯ ಗ್ರಾಮದ ಬೀರಪ್ಪ ಅವರ ಕುಟುಂಬ ಕೂಲಿನಾಲಿ ಮಾಡಿಕೊಂಡು ಕಡುಬಡತನದಲ್ಲಿ ಜೀವನ ಸಾಗಿಸುತ್ತಿದೆ. ಮನೆಯ ಯಜಮಾನ ಬೀರಪ್ಪನವರ ಮೂತ್ರಪಿಂಡಗಳು ವೈಫಲ್ಯಗೊಂಡಿದ್ದು, ನೆರವಿಗೆ ಕುಟುಂಬ ಮನವಿ ಮಾಡಿದೆ.
ಬೀರಪ್ಪನವರಿಗೆ ಆನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿವಿಧೆಡೆ ಚಿಕಿತ್ಸೆ ಪಡೆದಿದ್ದಾರೆ. ದಾವಣಗೆರೆ ಆಸ್ಪತ್ರೆಯಲ್ಲಿ ತೋರಿಸಿದಾಗ ಅವರ ಎರಡೂ ಮೂತ್ರಪಿಂಡಗಳು ವೈಫಲ್ಯಗೊಂಡಿರುವ ವಿಚಾರ ತಿಳಿದಿದೆ. ವೈದ್ಯರು ಆದಷ್ಟು ಬೇಗ ಮೂತ್ರಪಿಂಡ ಬದಲಾವಣೆ ಮಾಡುವಂತೆ ಸಲಹೆ ನೀಡಿದ್ದಾರೆ. ಸರಿಯಾದ ವೇಳೆಗೆ ಮೂತ್ರಪಿಂಡ ಬದಲಾಯಿಸಿದರೆ ಸ್ವಲ್ಪವಾದರೂ ಆರೋಗ್ಯದಿಂದ ಬದುಕಬಹುದು ಎಂದಿದ್ದಾರೆ. ಸಂಬಂಧಿಕರಲ್ಲಿ ಮೂತ್ರಪಿಂಡ ದಾನಕ್ಕೆ ಕೇಳುವಂತೆ ವೈದ್ಯರು ಬೀರಪ್ಪನಿಗೆ ಸೂಚಿಸಿದ್ದಾರೆ.
ವ್ಯಕ್ತಿಯ ಮೂತ್ರಪಿಂಡಗಳು ವೈಫಲ್ಯ - ಸಹಾಯಕ್ಕೆ ಅಂಗಲಾಚುತ್ತಿದೆ ಕುಟುಂಬ ಬೀರಪ್ಪರ ತಾಯಿ ರೇಣುಕಾ ಮೂತ್ರಪಿಂಡ ನೀಡಲು ಮುಂದೆ ಬಂದಿದ್ದಾರೆ. ಇವರಿಬ್ಬರ ಮೂತ್ರಪಿಂಡ ಬದಲಾವಣೆಗೆ ವೈದ್ಯರು ಸಹ ಒಪ್ಪಿದ್ದಾರೆ. ರೇಣುಕಾಳ ಮೂತ್ರಪಿಂಡ ತಪಾಸಣೆ ಮಾಡಿರುವ ವೈದ್ಯರು ಅವರ ಮೂತ್ರಪಿಂಡ ಬೀರಪ್ಪರಿಗೆ ಹೊಂದುತ್ತದೆ ಎಂದು ತಿಳಿಸಿದ್ದಾರೆ. ಆದರೆ ಈ ರೀತಿ ಮೂತ್ರಪಿಂಡ ಬದಲಾಯಿಸಲು 8 ರಿಂದ 10 ಲಕ್ಷ ರೂಪಾಯಿ ಹಣ ಖರ್ಚಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ವಾರಕ್ಕೆ ಎರಡ್ಮೂರು ಬಾರಿ ಡಯಾಲಿಸಿಸ್ ಮಾಡಿಸುವುದೇ ಕಷ್ಟವಿರುವಾಗ ಮೂತ್ರಪಿಂಡ ಬದಲಾವಣೆಗೆ ಎಲ್ಲಿಂದ ಹಣ ಹೊಂದಿಸುವುದು ಎನ್ನುವ ಚಿಂತೆಯಲ್ಲಿ ಕುಟುಂಬಸ್ಥರಿದ್ದಾರೆ. ಬೀರಪ್ಪರಿಗೆ ತಾಯಿ, ಪತ್ನಿ, ಮೂರು ಮಕ್ಕಳಿವೆ. ಈ ಕುಟುಂಬಕ್ಕೆ ಇದೀಗ ದಿಕ್ಕು ತೋಚದಂತಾಗಿದ್ದು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ.
ಇದನ್ನೂ ಓದಿ:ಕೆಸರುಗದ್ದೆಯಾದ ಬಳ್ಳಾರಿ ಎಪಿಎಂಸಿ ಮಾರುಕಟ್ಟೆ: ಹಬ್ಬದ ದಿನವೂ ವರ್ತಕರಿಗೆ ನಷ್ಟ