ಹಾವೇರಿ:ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಸುಮಾರು 70 ಮಿಲಿಮೀಟರ್ ಮಳೆಯಾಗಿದೆ.
ಜಿಲ್ಲೆಯ ತುಂಗಭದ್ರಾ, ಕುಮದ್ವತಿ, ವರದಾ ಮತ್ತು ಧರ್ಮಾ ನದಿಗಳು ಮೈದುಂಬಿ ಹರಿಯಲಾರಂಭಿಸಿವೆ. ಹಾನಗಲ್ ತಾಲೂಕಿನ ಅಲಿಪುರ, ಕೂಡಲ, ನಾಗನೂರು ಗ್ರಾಮಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಕೂಡಲ ಮತ್ತು ನಾಗನೂರು ಸಂಪರ್ಕಿಸುವ ಸೇತುವೆ ಜಲಾವೃತವಾಗಿದೆ. ದೇವಗಿರಿ- ಕಳಸೂರು ಸಂಪರ್ಕಿಸುವ ಸೇತುವೆ ಸಹ ಮುಳುಗಡೆಯಾಗಿದ್ದು, ಜನರು ಬೇರೆ ಮಾರ್ಗಗಳ ಮೂಲಕ ಸಂಚರಿಸುತ್ತಿದ್ದಾರೆ. ಇನ್ನು ಕರ್ಜಿಗಿ ಮತ್ತು ಮುಗದೂರು ನಡುವೆ ವರದಾ ನದಿ ಮಹಾಪೂರದಿಂದಾಗಿ ಸೇತುವೆ ಮೇಲೆ ನೀರು ಹರಿಯಲಾರಂಭಿಸಿದೆ.
ಹಾವೇರಿ ಜಿಲ್ಲೆಯಲ್ಲಿ ಮಳೆಯ ಅವಾಂತರ ಜಿಲ್ಲೆ ಶಿಗ್ಗಾವಿ ಮತ್ತು ಸವಣೂರು ಕ್ಷೇತ್ರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಮಾಜಿ ಸಚಿವ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸವಣೂರು ತಾಲೂಕಿನ ಹಲಸೂರು ತವರಮೆಳ್ಳಳ್ಳಿ ಸೇರಿದಂತೆ ಹಲವು ಗ್ರಾಮಗಳು ಪ್ರವಾಹಭೀತಿಗೆ ಒಳಗಾಗಿದ್ದು ಜನರು ಗ್ರಾಮ ತೊರೆಯುತ್ತಿರುವ ದೃಶ್ಯಗಳು ಕಂಡುಬಂದವು. ಇನ್ನು ಜಿಲ್ಲಾಡಳಿತದಿಂದ 18 ಪರಿಹಾರ ಕೇಂದ್ರಗಳನ್ನ ತೆರೆಯಲಾಗಿದ್ದು, 907 ಮನೆಗಳು ಹಾನಿಗೊಳಗಾಗಿವೆ.
27 ವಿದ್ಯುತ್ ಕಂಬಗಳು ಧರೆಗುರುಳಿವೆ. ಹಾನಗಲ್ ತಾಲೂಕು ಅಲ್ಲಿಪುರದಲ್ಲಿ ಪ್ರಾರ್ಥನಾ ಮಂದಿರಕ್ಕೆ ನೀರು ಹೊಕ್ಕರೆ ಹಾವೇರಿ ತಾಲೂಕಿನ ಹೊಸರಿತ್ತಿಯಲ್ಲಿ ಮಠಕ್ಕೆ ಮಳೆನೀರು ನುಗ್ಗಿದೆ. ಸವಣೂರು ತಾಲೂಕಿನ ಸಿದ್ದಾಪುರದಲ್ಲಿ 10 ಕುರಿಗಳು, ಹಾವೇರಿ ತಾಲೂಕಿನ ಗಣಜೂರಿನಲ್ಲಿ 7 ಮೇಕೆಗಳು ಮಳೆಗಾಹುತಿಯಾಗಿವೆ. ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ರೀತಿಯಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಜನ ಆತಂಕ ಪಡಬೇಡಿ ಎಂದು ಜಿಲ್ಲಾಧಿಕಾರಿ ಅಭಯ ನೀಡಿದ್ದಾರೆ.