ಹಾವೇರಿ:ರಾಜ್ಯದಲ್ಲಿ ಕುರಿ ಅಥವಾ ಮೇಕೆ ಆಕಾಲಿಕವಾಗಿ ಸಾವನ್ನಪ್ಪಿದರೆ ಅಥವಾ ಸಿಡಿಲು ಬಡಿದು ರೋಗರುಜಿನಗಳಿಂದ ಹಾಗೂ ಯಾವುದಾದರೂ ಕಾರಣಗಳಿಂದ ಮೃತಪಟ್ಟಿದ್ದರೆ, ನೆರವು ನೀಡುವ ಉದ್ದೇಶದಿಂದ ಸರ್ಕಾರ ಅನುಗ್ರಹ ಯೋಜನೆ ಆರಂಭಿಸಿತ್ತು. ಇದೀಗ ಈ ಯೋಜನೆಯಡಿ ಪರಿಹಾರ ಬರುತ್ತಿಲ್ಲ ಎಂದು ಕುರಿಗಾರರು ಆರೋಪಿಸಿದ್ದಾರೆ.
ದೊಡ್ಡ ಕುರಿ ಸಾವನ್ನಪ್ಪಿದ್ದರೆ 5 ಸಾವಿರ, ಸಣ್ಣಕುರಿ ಸಾವನ್ನಪ್ಪಿದ್ದರೆ 3,500 ರೂಪಾಯಿ ಪರಿಹಾರ ನೀಡುವ ಯೋಜನೆ ಇದಾಗಿತ್ತು. ಈ ಹಿನ್ನೆಲೆಯಲ್ಲಿ ಕುರಿಗಾರರು ತಮ್ಮ ಕುರಿಗಳು ಅಕಾಲಿಕವಾಗಿ ಸಾವನ್ನಪ್ಪಿದರೆ ಅದರ ಮರಣೋತ್ತರ ಪರೀಕ್ಷೆ ನಡೆಸಿ, ಫೋಟೋ ತೆಗೆದು ಪಶುಸಂಗೋಪನೆ ಇಲಾಖೆಗೆ ವರದಿ ಸಲ್ಲಿಸಿದ ಕೆಲ ದಿನಗಳ ನಂತರ ಪರಿಹಾರವಾಗಿ 5 ಸಾವಿರ ರೂಪಾಯಿ ಸಿಗುತ್ತಿತ್ತು. ಆದರೆ, ಕಳೆದ ಕೆಲ ದಿನಗಳಿಂದ ಈ ಅನುಗ್ರಹ ಯೋಜನೆಯಲ್ಲಿ ಪರಿಹಾರ ಬರುತ್ತಿಲ್ಲ ಎಂದು ಹಾವೇರಿಯ ಕುರಿಗಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಹಾವೇರಿ ತಾಲೂಕಿನ ಹೊಸರಿತ್ತಿ ಕುರಿಗಾರ ನಾಗರಾಜ್ ಮಾತನಾಡಿ, "ಕಳೆದ ಹಲವು ದಿನಗಳಿಂದ ಈ ಯೋಜನೆಯಲ್ಲಿ ಹಣ ಬರುತ್ತಿಲ್ಲ. ಕೆಲವೇ ತಿಂಗಳುಗಳ ಅಂತರದಲ್ಲಿ ಕುರಿದೊಡ್ಡಿಯಲ್ಲಿ ಸುಮಾರು 15 ಕ್ಕೂ ಅಧಿಕ ಕುರಿಗಳು ಸಾವನ್ನಪ್ಪಿವೆ. ಸತ್ತ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿ ಇಲಾಖೆಗೆ ಫೋಟೋ ನೀಡುವುದೇ ಒಂದು ಕೆಲಸವಾಗಿದೆ. ತಾಲೂಕು ಕೇಂದ್ರಗಳಲ್ಲಿ ವೈದ್ಯರಿಲ್ಲದ ಕಾರಣ ಹಾವೇರಿ ಜಿಲ್ಲಾ ಪಶು ಆಸ್ಪತ್ರೆಗೆ ಕುರಿಗಳ ಮೃತದೇಹ ತಂದು ಮರಣೋತ್ತರ ಪರೀಕ್ಷೆ ನಡೆಸಬೇಕು. ಆದರೆ, ಪರಿಹಾರ ಮಾತ್ರ ಬಂದಿಲ್ಲ. ಈ ಕುರಿತಂತೆ ಅಧಿಕಾರಿಗಳನ್ನು ಕೇಳಿದರೆ, ಬರುತ್ತೆ ಬರುತ್ತೆ" ಎನ್ನುತ್ತಾರೆ ಎಂದು ಆರೋಪಿಸಿದರು.