ಹಾವೇರಿ:ಕಾಂಗ್ರೆಸ್ ನಾಯಕ ಮನೋಹರ್ ತಹಶೀಲ್ದಾರ್ ಅವರಿಂದು ಮಾಜಿ ಸಿಎಂ ಕುಮಾರಸ್ವಾಮಿ, ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರಿದ್ದಾರೆ. ಈ ಸಂದರ್ಭದಲ್ಲಿ ಅವರು ವೇದಿಕೆ ಮೇಲೆ ಕಣ್ಣೀರು ಸುರಿಸಿದ ಪ್ರಸಂಗವೂ ನಡೆಯಿತು. ಪಕ್ಷ ಸೇರ್ಪಡೆ ಕಾರ್ಯಕ್ರಮವನ್ನು ಹಾನಗಲ್ ಪಟ್ಟಣದಲ್ಲಿ ಏರ್ಪಡಿಸಲಾಗಿತ್ತು.
"ಕಾಂಗ್ರೆಸ್ ಪಕ್ಷ ನನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. 50 ವರ್ಷ ಪಕ್ಷಕ್ಕಾಗಿ ದುಡಿದ ನನಗೆ ಟಿಕೆಟ್ ನೀಡಲಿಲ್ಲ. 2012 ರಲ್ಲಿ ಹಾಲಿ ಶಾಸಕನಾಗಿದ್ದ ನನಗೆ ಟಿಕೆಟ್ ನೀಡದೆ ಶ್ರೀನಿವಾಸ ಮಾನೆಗೆ ಟಿಕೆಟ್ ಕೊಟ್ಟರು. ನಂತರ ಎಂಎಲ್ಸಿ ಮಾಡುವುದಾಗಿ ತಿಳಿಸಿದ್ದ ನಾಯಕರು ಮಾತನಾಡಿಸುವ ಸೌಜನ್ಯವನ್ನೂ ತೋರಿಸಲಿಲ್ಲ. ಈ ಬಾರಿ ನನಗೆ ಕೊನೆಯ ಅವಕಾಶ ಕಲ್ಪಿಸಿ ಎಂದರೂ ಟಿಕೆಟ್ ನೀಡಲಿಲ್ಲ" ಎಂದು ಮನೋಹರ್ ತಹಶೀಲ್ದಾರ್ ಕಣ್ಣೀರು ಹಾಕಿದರು.
ಹಾನಗಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಮನೋಹರ ತಹಶೀಲ್ದಾರ್ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷವನ್ನು ಏಪ್ರಿಲ್ 1 ರಂದು ಸೇರ್ಪಡೆಯಾಗಿದ್ದರು."ಕಳೆದ ಐವತ್ತು ವರ್ಷಗಳಿಂದ ನಾನು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದೇನೆ. ಕಾಂಗ್ರೆಸ್ ಪಕ್ಷ ನನಗೆ ತಾಯಿಯಂತಿತ್ತು. ಆದರೆ ಪಕ್ಷವನ್ನು ತಾಯಿಯಂತೆ ನೋಡಿಕೊಂಡ ನನಗೆ ಕಾಂಗ್ರೆಸ್ ದ್ರೋಹ ಮಾಡಿದೆ. ಇದುವರೆಗೆ ಮಾಡಿದ ಕಾರ್ಯಕ್ಕೆ ಮನ್ನಣೆ ಸಿಗದ ಜಾಗದಲ್ಲಿ ನಾನು ಇರೋದಿಲ್ಲ. ಇನ್ನೆಂದೂ ನಾನು ಕಾಂಗ್ರೆಸ್ ಕಡೆ ಮುಖ ಮಾಡೋದಿಲ್ಲ" ಎಂದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡಾಗ ಹೇಳಿದ್ದರು.