ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ ಹಾವೇರಿ: ಸಚಿವ ಬಿ.ಸಿ ಪಾಟೀಲ್ ಈ ಬಾರಿ 25 ರಿಂದ 30 ಸಾವಿರ ಮತಗಳ ಅಂತರದಿಂದ ಜಯ ಸಾಧಿಸುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಹಾವೇರಿ ಜಿಲ್ಲೆಯ ರಟ್ಟಿಹಳ್ಳಿಯಲ್ಲಿ ಬಿ.ಸಿ ಪಾಟೀಲ್ ಪರ ಪ್ರಚಾರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಬಿ.ಸಿ.ಪಾಟೀಲ್ ಕೃಷಿ ಸಚಿವರಾಗಿ ರೈತರ ಪರವಾಗಿ ಕೆಲಸ ಮಾಡಿದ ಧೀಮಂತ ವ್ಯಕ್ತಿ. ಅವರನ್ನು ನೀವು ಗೆಲ್ಲಿಸಬೇಕು ಎಂದು ಬಿಎಸ್ವೈ ಮನವಿ ಮಾಡಿದರು. ಇದೇ ವೇಳೆ ಯು.ಬಿ.ಬಣಕಾರ್ ವಿರುದ್ಧ ವಾಗ್ದಾಳಿ ನಡೆಸಿದ ಯಡಿಯೂರಪ್ಪ, ಬಣಕಾರ್ ನಮಗೆ ದ್ರೋಹ ಮಾಡಿದ ವ್ಯಕ್ತಿ. ಅವರು ಬಹಳ ಹಗುರವಾಗಿ ಮಾತನಾಡುತ್ತಿದ್ದಾರೆ. ನಮ್ಮಲ್ಲಿ ಎಲ್ಲ ಅಧಿಕಾರ ಅನುಭವಿಸಿ ನಮಗೆ ದ್ರೋಹ ಮಾಡಿದರು. ಜನತೆ ಅವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ವಿಧವೆಯರ ಮಾಸಿಕ ಪಿಂಚಣಿ 800-2000ಕ್ಕೆ ಹೆಚ್ವು ಮಾಡುತ್ತೇವೆ. ಬಿಪಿಎಲ್ ಕುಟುಂಬಕ್ಕೆ ಪ್ರತಿ ವರ್ಷಕ್ಕೆ 3 ಸಿಲಿಂಡರ್ ಉಚಿತವಾಗಿ ನೀಡುತ್ತೇವೆ. ಬಿಪಿಎಲ್ ಕುಟುಂಬಕ್ಕೆ ಪ್ರತಿ ದಿನ ಅರ್ಧ ಲೀಟರ್ ಹಾಲು ಹಾಗೂ ತಿಂಗಳಿಗೆ 5 ಕೆ.ಜಿ ಸಿರಿಧಾನ್ಯ ಕೊಡುತ್ತೇವೆ. ಕಳಸಾ ಬಂಡೂರಿ, ಕೃಷ್ಣಾ ಮೇಲ್ಡಂಡೆ ಯೋಜನೆ ಬಾಕಿ ಇರುವ ಕೆಲಸ ಮಾಡಲಿದ್ದೇವೆ ಎಂದು ಬಿಎಸ್ವೈ ಭರವಸೆ ನೀಡಿದರು.
ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಬಿ.ಸಿ ಪಾಟೀಲ್ ಬಿಎಸ್ವೈ ಗುಣಗಾನ ಮಾಡಿದ ಪಾಟೀಲ್: ಬಿಜೆಪಿ ಕಟ್ಟಿ ಬೆಳೆಸಿದ ಧೀಮಂತ ನಾಯಕ, ರಾಜಾಹುಲಿ ಬಿ.ಎಸ್ ಯಡಿಯೂರಪ್ಪ ಎಂದು ಬಿ.ಸಿ ಪಾಟೀಲ್ ಗುಣಗಾನ ಮಾಡಿದರು. ಮೇ 10ರಂದು ಚುನಾವಣೆ ಇದೆ. ಹಿರೇಕೆರೂರು ಸರ್ವಜ್ಞನ ನಾಡು. ಶಿಕಾರಿಪುರ ಶರಣರ ನಾಡು. ನಮಗೆ ಆಶೀರ್ವಾದ ಮಾಡಿ ಎಂದು ಬಿ.ಸಿ.ಪಾಟೀಲ್ ಮನವಿ ಮಾಡಿದರು.
ಈ ಕ್ಷೇತ್ರದಲ್ಲಿ ನಾನು 4 ಬಾರಿ ಗೆದ್ದಿದ್ದೇನೆ. ಕಾಂಗ್ರೆಸ್, ಜೆಡಿಎಸ್ನ ದುರಾಡಳಿತವನ್ನು ನೋಡಿದ್ದೀರಿ. ಈ ರಾಜ್ಯ ರೈತ ನಾಯಕನ ಕೈಗೆ ಸಿಗಬೇಕು ಅಂತಾ ಹೇಳಿ ನಾವು ಬಿಜೆಪಿಗೆ ಬಂದೆವು. ಆದರೆ ಕಾಂಗ್ರೆಸ್ ನಮ್ಮನ್ನು ಅನರ್ಹಗೊಳಿಸಿತು. ನಮಗೆ ಅರಣ್ಯ ಇಲಾಖೆ ಕೊಟ್ಟಿದ್ರು. ಆದರೆ ನಾನು ರೈತರ ಪರವಾಗಿ ಕೆಲಸ ಮಾಡಲು ಕೃಷಿ ಖಾತೆ ಆಯ್ಕೆ ಮಾಡಿಕೊಂಡಿದ್ದೆ. ಈ ತಾಲೂಕಿನ ಎಲ್ಲಾ ಕೆರೆ ತುಂಬಿಸಿದ್ದೇವೆ. ಕ್ಷೇತ್ರಕ್ಕೆ 185 ಕೋಟಿ ಹಣ ಯಡಿಯೂರಪ್ಪ ಕೊಟ್ಟರು. ರಟ್ಟಿಹಳ್ಳಿ ತಾಲೂಕಾಗಿದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ಆಗಲು ಸಂಸದ ರಾಘವೇಂದ್ರ ಕೊಡುಗೆ ಅಪಾರ ಎಂದು ಪಾಟೀಲ್ ಹೇಳಿದರು.
2019ರ ಚುನಾವಣೆಯಲ್ಲಿ ನಾನು ಯಡಿಯೂರಪ್ಪ ಅವರಿಗೆ ವಿನಂತಿ ಮಾಡಿದ್ದರಿಂದ ಯು.ಬಿ ಬಣಕಾರ್ ಅವರಿಗೆ ಉಗ್ರಾಣ ನಿಗಮ ಕೊಟ್ಟಿದ್ದರು. ಅವರು ಮೂರು ವರ್ಷ ಅನಭಿಶಕ್ತ ದೊರೆಯಾಗಿ ಕೆಲಸ ಮಾಡಿದರು. ಆದರೆ ಹಿರೇಕೇರೂರು ರಟ್ಟಿಹಳ್ಳಿಯಲ್ಲಿ ಒಂದೇ ಒಂದು ಉಗ್ರಾಣ ಕೊಡಲಿಲ್ಲ. 2018ರಲ್ಲಿ ಯಡಿಯೂರಪ್ಪ ಅವರ ಗಾಳಿ ಬೀಸಿತು. ಆಗಲೂ ನಾನು ಗೆದ್ದಿದ್ದೆ. ಅಭಿವೃದ್ಧಿಯಲ್ಲಿ ನನ್ನ ಪಾಲಿದೆ ಎಂದು ಬಣಕಾರ್ ಹೇಳುತ್ತಾರೆ. ಸೋತವರ ತ್ಯಾಗ ದೊಡ್ಡದಾ?, ಗೆದ್ದವರ ತ್ಯಾಗ ದೊಡ್ಡದಾ? ಎಂದು ಬಿ.ಸಿ.ಪಾಟೀಲ್ ಪ್ರಶ್ನಿಸಿದರು .
ನಾನು ಬಿಜೆಪಿಗೆ ಬಂದಿದ್ದಕ್ಕೆ ಅವರು ಉಗ್ರಾಣ ನಿಗಮದ ಅಧ್ಯಕ್ಷರಾದರು. ಬಣಕಾರ್ ಕೈ ಹಿಡಿದು ಮೇಲಿತ್ತಿದವರು ಯಡಿಯೂರಪ್ಪ. ಆದರೆ ಬಣಕಾರ್ ಶಿಕಾರಿಪುರದಲ್ಲಿ ಕಾಂಗ್ರೆಸ್ ಗೆಲ್ಲಿಸಿ ಅಂತಾ ಹೇಳ್ತಾರೆ ಅಂದರೆ ಮನಸ್ಸಲ್ಲಿ ಎಷ್ಟು ವಿಷ ಇರಬಹುದು? ಎಂದು ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ನೀವು ಮಾಡಿದ ತಪ್ಪಿಗೆ ಜೈಲು ಸೇರಿದ್ರಿ.. ಇದರಲ್ಲಿ ಬಿಜೆಪಿ ತಪ್ಪೇನಿದೆ: ಡಿಕೆಶಿಗೆ ಸಚಿವ ಬಿ.ಸಿ. ಪಾಟೀಲ್ ಪ್ರಶ್ನೆ