ಹಾವೇರಿ :ರಾಜ್ಯ ಸರ್ಕಾರ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಐದು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ. ಉಳಿದಂತೆ ಮೂರು ತಾಲೂಕುಗಳನ್ನು ಸರ್ಕಾರ ಬರಗಾಲಪೀಡಿತ ಎಂದು ಘೋಷಿಸಿಲ್ಲ. ರಾಣೆಬೆನ್ನೂರು, ಹಿರೇಕೆರೂರು, ಹಾವೇರಿ, ಸವಣೂರು ರಟ್ಟಿಹಳ್ಳಿ ತಾಲೂಕುಗಳು ಬರಗಾಲ ಪೀಡಿತವಾಗಿವೆ. ಉಳಿದಂತೆ ಬ್ಯಾಡಗಿ, ಹಾನಗಲ್ ಮತ್ತು ಶಿಗ್ಗಾಂವಿ ತಾಲೂಕುಗಳನ್ನು ಬರಗಾಲಪೀಡಿತ ಎಂದು ಘೋಷಣೆ ಮಾಡಿಲ್ಲ.ಇದರಿಂದ ಆಕ್ರೋಶಗೊಂಡು ಬ್ಯಾಡಗಿ, ಹಾನಗಲ್ ಮತ್ತು ಶಿಗ್ಗಾಂವಿ ತಾಲೂಕಿನ ರೈತರು ಇದೀಗ ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ನೇತೃತ್ವದಲ್ಲಿ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಮೂರು ತಾಲೂಕುಗಳ ತಹಶೀಲ್ದಾರ್ ಕಚೇರಿ ಮುಂದೆ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಗಳಲ್ಲಿ ಭಜನೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನ ನಡೆಸುತ್ತಿದ್ದಾರೆ. ಅಲ್ಲದೆ ಪ್ರತಿಭಟನಾ ಸ್ಥಳದಲ್ಲಿಯೇ ಆಹಾರ ತಯಾರಿಸುತ್ತಿದ್ದಾರೆ. ಸರ್ಕಾರ ಮೂರು ತಾಲೂಕುಗಳನ್ನ ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿದೆ. ಈ ಮೂರು ತಾಲೂಕುಗಳನ್ನ ಬರಗಾಲಪೀಡಿತ ಎಂದು ಘೋಷಣೆ ಮಾಡುವವರೆಗೆ ನಾವು ಹೋರಾಟ ಹಿಂದೆ ಪಡೆಯುವದಿಲ್ಲ ಎಂದು ಪಟ್ಟುಹಿಡಿದಿವೆ.
ಕಳೆದ ತಿಂಗಳು 25 ರಂದು ಹಾವೇರಿಗೆ ಬಂದಿದ್ದ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ರೈತರಿಗೆ ಈ ಮೂರು ತಾಲೂಕುಗಳನ್ನ ಸಹ ಬರಗಾಲಪೀಡಿತ ಎಂದು ಘೋಷಣೆ ಮಾಡುವುದಾಗಿ ತಿಳಿಸಿದ್ದರು. ಅಲ್ಲದೆ ಪ್ರತಿಶತ 25 ರಷ್ಟು ಮಧ್ಯಂತರ ಪರಿಹಾರ ನೀಡುವ ಭರವಸೆ ನೀಡಿದ್ದರು. ಆದರೆ ಸಚಿವರು ಹೇಳಿ ಹೋಗಿ 10 ದಿನಗಳಾದರೂ ಈ ಮೂರು ತಾಲೂಕುಗಳನ್ನು ಬರಗಾಲಪೀಡಿತ ಎಂದು ಘೋಷಣೆ ಮಾಡಿಲ್ಲ. ಅಲ್ಲದೆ ಮಧ್ಯಂತರ ಪರಿಹಾರ ಸಹ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನಾಲ್ಕನೆ ತಾರೀಖಿನವರೆಗೆ ಸಚಿವರು ಭರವಸೆ ಈಡೇರಿಸುತ್ತಾರೆ ಎಂದುಕೊಂಡಿದ್ದೆವು. ಆದರೆ ಅವರು ನೀಡಿದ್ದ ಭರವಸೆ ಈಡೇರಿಸಿಲ್ಲ. ಈ ಹಿನ್ನೆಲೆಯಲ್ಲಿ ಮೂರು ತಾಲೂಕುಗಳಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.