ಕರ್ನಾಟಕ

karnataka

ETV Bharat / state

ಬಿಜೆಪಿ ಜನ ಸಂಕಲ್ಪ ಯಾತ್ರೆ: ಕಾಂಗ್ರೆಸ್​ ವಿರುದ್ಧ ಹರಿಹಾಯ್ದ ಬಿಜೆಪಿ ಮುಖಂಡರು

ಹಾವೇರಿಯಲ್ಲಿ ಬುಧವಾರ ಬಿಜೆಪಿ ಜನ ಸಂಕಲ್ಪ ಯಾತ್ರೆ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ನಾಯಕರು 'ಕೈ' ಪಕ್ಷದ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

BJP Jan Sankalpa Yatra held in Haveri
ಹಾವೇರಿಯಲ್ಲಿ ನಡೆದ ಬಿಜೆಪಿ ಜನ ಸಂಕಲ್ಪ ಯಾತ್ರೆ

By

Published : Jan 26, 2023, 9:44 AM IST

ಬಿಜೆಪಿ ಜನ ಸಂಕಲ್ಪ ಯಾತ್ರಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಯಡಿಯೂರಪ್ಪ ಹಾಗೂ ಬೊಮ್ಮಾಯಿ

ಹಾವೇರಿ: "ಹಣ, ಹೆಂಡ, ತೋಳ್ಬಲ ಮತ್ತು ಅಧಿಕಾರದ ಬಲದಿಂದ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದುಕೊಂಡರೆ ಅದು ಕೇವಲ ತಿರುಕನ ಕನಸು" ಎಂದು ಕಾಂಗ್ರೆಸ್​ ಮುಖಂಡರ ವಿರುದ್ಧ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ವಾಗ್ದಾಳಿ ನಡೆಸಿದರು. ಹಾವೇರಿ ಜಿಲ್ಲೆ ಹಿರೇಕೆರೂರಿನಲ್ಲಿ ಬುಧವಾರ ನಡೆದ ಬಿಜೆಪಿ ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ನಮ್ಮ ದೇಶ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಕರ್ನಾಟಕದಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ದೇಶ ಅಚ್ಚರಿ ಪಡುವಂತೆ ಅಭಿವೃದ್ಧಿಯಾಗುತ್ತಿದೆ" ಎಂದರು.

"ಈ ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಶ್ರೇಯೋಭಿವೃದ್ದಿಗಾಗಿ ದೇಶದಲ್ಲೇ ಮೊದಲ ಬಾರಿಗೆ ರೈತರಿಗೋಸ್ಕರ ಕೃಷಿ ಬಜೆಟ್​ ಮಂಡನೆ ಮಾಡಿದ್ದೆ. ರೈತರು ನಮ್ಮ ದೇಶದ ಬೆನ್ನೆಲುಬು. ನೀವು ನೆಮ್ಮದಿಯಾಗಿದ್ದರೆ ಮಾತ್ರ ರಾಜ್ಯ ನೆಮ್ಮದಿಯಿಂದಿರಲು ಸಾಧ್ಯ. ನೀವು ನೆಮ್ಮದಿಯಾಗಿ ಇರಬೇಕಾದರೆ ನಿಮ್ಮ ಹೊಲಕ್ಕೆ ನೀರು ಕೊಡಬೇಕು, ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಕೊಡಬೇಕು" ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿಎಂ ಬೊಮ್ಮಾಯಿ, "ಸಿದ್ದರಾಮಯ್ಯನವರ ಸರ್ಕಾರ ಭ್ರಷ್ಟಾಚಾರ, ಸ್ವಜನ ಪಕ್ಷಪಾತದಿಂದ ಕೂಡಿ ಎಲ್ಲ ಸೌಭಾಗ್ಯಗಳನ್ನು ರಾಜ್ಯಕ್ಕೆ ದೌರ್ಭಾಗ್ಯವಾಗಿ ನೀಡಿದೆ. ಸ್ವತಃ ಸಿದ್ದರಾಮಯ್ಯನವರು ತಮ್ಮ ಸ್ವಕ್ಷೇತ್ರದಲ್ಲಿ ಸೋತವರು. ಇದೆಲ್ಲ ಕಾರಣಕ್ಕೆ ನಾಡಿನ ಜನತೆ ಅವರನ್ನು ಮನೆಗೆ ಕಳುಹಿಸಿದರು" ಎಂದರು. ಮುಂದುವರೆದು, "ರಾಜ್ಯದಲ್ಲಿ ಕಾಂಗ್ರೆಸ್‌ನವರು ಬರುವ ಮೊದಲು ಪಡಿತರ ಯೋಜನೆ ಇರಲಿಲ್ಲವಾ? ಎಂದು ಪ್ರಶ್ನಿಸಿದ ಬೊಮ್ಮಾಯಿ, ಮೊದಲು ನೀಡುತ್ತಿದ್ದ 30 ಕೆ.ಜಿ ರೇಷನ್ ಅಕ್ಕಿಯನ್ನು ಏಳು ಕೆಜಿಗೆ ಮಾಡಿದರು. ನಂತರ ನಾಲ್ಕು ಕೆಜಿಗೆ ಇಳಿಸಿದರು. ಈಗ ಮತ್ತೆ 10 ಕೆಜಿ ಮಾಡುತ್ತೇವೆ ಎನ್ನುತ್ತಿದ್ದಾರೆ" ಎಂದರು.

"ಈಗ 10 ಕೆಜಿ ನೀಡುತ್ತೇವೆ ಎನ್ನುತ್ತಾರಲ್ಲ, ಅಧಿಕಾರದಲ್ಲಿ ಇರುವಾಗಲೇ ಮಾಡಬೇಕಿತ್ತು. ಈಗ ಯಾಕೆ ಆಶ್ವಾಸನೆ ನೀಡುತ್ತಿದ್ದಾರೆ. ಇದು ಕೇವಲ ಚುನಾವಣಾ ಕಾರಣಕ್ಕೆ. ಕಾಂಗ್ರೆಸ್​ ಪಕ್ಷದವರು ಜನರಿಗೆ ಮೋಸ ಮಾಡುತ್ತಾರೆ. ಅವರಿಗೆ ಸಿಗುವ ಅನ್ನದಾನದಲ್ಲಿ ಕನ್ನ ಹಾಕುತ್ತೀರಿ. ನಿಮ್ಮ ಈ ಅವ್ಯವಹಾರಗಳನ್ನೆಲ್ಲ ತನಿಖೆ ಮಾಡುತ್ತಿದ್ದ ಹಿರಿಯ ಪೊಲೀಸ್ ಅಧಿಕಾರಿ ಉತ್ತರಪ್ರದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದರು" ಎಂದು ಹೇಳಿದರು.

"ಕಾಂಗ್ರೆಸ್ ಪಕ್ಷದವರು ಹತಾಶರಾಗಿದ್ದಾರೆ, ಅವರ ಗ್ಯಾರಂಟಿ ಯೋಜನೆಯಲ್ಲಿ ಸೋಲು ಗ್ಯಾರಂಟಿ. ರಾಜ್ಯದಲ್ಲಿ ನಿಮ್ಮನ್ನು ಜನರು ಮನೆಗೆ ಕಳುಹಿಸಿದ್ದಾರೆ. ನಿಮಗೆ ಅದುವೇ ಖಾಯಂ ಸ್ಥಾನ. ಬಿಜೆಪಿ ಪಕ್ಷ 2023ರಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತದೆ. ದೇಶದಲ್ಲಿ ಕರ್ನಾಟಕ ನಂಬರ್ 1 ಸ್ಥಾನಕ್ಕೆ ಏರುತ್ತದೆ" ಎಂದು ಬೊಮ್ಮಾಯಿ ತಿಳಿಸಿದರು. "ಲೋಕಾಯುಕ್ತದಲ್ಲಿ 59 ಕೇಸ್‌ಗಳಿದ್ದವು. ಆದರೆ ಕೇಸ್ ಮುಚ್ಚಿಹಾಕಲು ಲೋಕಾಯುಕ್ತವನ್ನೇ ಮುಚ್ಚಿ ಹಾಕಿದ್ದೀರಿ. ನ್ಯಾಯಾಲಯದ ಆದೇಶದ ಮೇರೆಗೆ ಈಗ ಮತ್ತೆ ನಾವು ಲೋಕಾಯುಕ್ತ ಆರಂಭಿಸಿದ್ದೇವೆ. ನಿಮ್ಮ 59 ಕೇಸ್‌ಗಳನ್ನು ಲೋಕಾಯುಕ್ತದ ತನಿಖೆಗೆ ನೀಡುತ್ತೇವೆ. ನಿಮ್ಮ ಬಣ್ಣ ಬಯಲಾಗಲಿದೆ. ನಿಮ್ಮ ಭ್ರಷ್ಟಾಚಾರ ಎಲ್ಲರಿಗೂ ಗೊತ್ತಾಗುತ್ತದೆ. ಜನರ ಮುಂದೆ ನಿಮ್ಮ ಮುಖವಾಡ ಕಳಚಲಿದೆ" ಎಂದು ಹೇಳಿದರು.

2012ರಲ್ಲಿ ಹಾವೇರಿ ಜಿಲ್ಲೆಗೆ ಮೆಡಿಕಲ್ ಕಾಲೇಜ್ ಮಾಡಿಸಿದ್ದು ಬಿಜೆಪಿಯವರು. ಆದರೆ 2013 ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಹಾವೇರಿ ಜಿಲ್ಲೆಗೆ ಇದ್ದಂಥ ಮೆಡಿಕಲ್ ಕಾಲೇಜನ್ನು ತೆಗೆದು ಗದಗ ಜಿಲ್ಲೆಯಲ್ಲಿ ಸ್ಥಾಪನೆ ಮಾಡಿದರು. ಅಲ್ಲದೇ ಸಿದ್ದರಾಮಯ್ಯ ನಿಮ್ಮ ಅಧಿಕಾರ ಅವಧಿಯಲ್ಲಿ ಹಾವೇರಿ ಕ್ಷೇತ್ರಕ್ಕೆ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ನಾವು 100 ಕೋಟಿ ರೂ ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆ ಮಾಡಿದ್ದೇವೆ. ಬರುವ ದಿನಗಳಲ್ಲಿ ಉದ್ಘಾಟನೆ ಕೂಡ ಮಾಡುತ್ತೇವೆ, ಬಂದು ನೋಡಿ ಎಂದು ಟಾಂಗ್​ ನೀಡಿ, ನಮ್ಮ ಸರ್ಕಾರ ರೈತ ಪರವಾಗಿದೆ. ಯೋಜನೆಗಳಾದ ಸ್ವಚ್ಛ ಭಾರತ, ಉಜ್ವಲ್, ವಿದ್ಯಾಭ್ಯಾಸ, ವಿದ್ಯುತ್ ಇವೆಲ್ಲವನ್ನೂ ನೀಡಿದ್ದು ನಮ್ಮ ಸರ್ಕಾರ" ಎಂದು ಬೊಮ್ಮಾಯಿ ಕಾಂಗ್ರೆಸ್​ ಪಕ್ಷಕ್ಕೆ ಸವಾಲೆಸೆದು ಮಾತನಾಡಿದರು.

ಬಿಜೆಪಿ ಜನ ಸಂಕಲ್ಪ ಯಾತ್ರಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ ಪಾಟೀಲ್​​ ಹಾಗು ಶ್ರೀರಾಮುಲು

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, "ನಾನು ಬಿಜೆಪಿ ಸೇರಿ ಹಿರೇಕೆರೂರಿಗೆ ಶಾಸಕನಾಗಿ ಬಂದ ಮೇಲೆ ಸುಮಾರು ಕೋಟ್ಯಂತರ ರೂ ಅನುದಾನ ಬಂದಿದೆ. ಹಿರೇಕೆರೂರು ಮತ್ತು ರಟ್ಟಿಹಳ್ಳಿಯ ಎಲ್ಲ ಕೆರೆಗಳನ್ನು ಏತ ನೀರಾವರಿ ಯೋಜನೆಯಲ್ಲಿ ತುಂಬಿಸಲಾಗಿದೆ. ಈಗ ಹಿರೇಕೆರೂರು ತಾಲೂಕಿನ ಎಲ್ಲ ಕೆರೆಗಳು ತುಂಬಿವೆ. ಹಿರೇಕೆರೂರುಗೆ ಮುಂದಿನ ದಿನಗಳಲ್ಲಿ ಎಂದೂ ಬರಗಾಲ ಬರುವುದಿಲ್ಲ. ನಮ್ಮ ರೈತರು ಸಮೃದ್ದವಾಗಿ ಬೆಳೆ ಬೆಳೆಯುತ್ತಾರೆ" ಎಂದು ತಿಳಿಸಿದರು.

ಸಾರಿಗೆ ಸಚಿವ ಶ್ರೀರಾಮುಲು ಕಾಂಗ್ರೆಸ್ ಮಾತನಾಡಿ, ಪಕ್ಷವನ್ನು ಧೂಳೀಪಟ ಮಾಡಬೇಕು. ಮತ್ತೆ ಬಿಜೆಪಿಯಿಂದ ಬಸವರಾಜ ಬೊಮ್ಮಾಯಿ ಸಿಎಂ ಆಗಬೇಕು ಎಂದು ಪ್ರಾರ್ಥನೆ ಮಾಡುವುದಾಗಿ ತಿಳಿಸಿದರು. ಚುನಾವಣೆಯಲ್ಲಿ 150 ಸ್ಥಾನಗಳಲ್ಲಿ ಗೆಲ್ಲುವ ಸಂಕಲ್ಪ ಮಾಡಿದ್ದೇವೆ. ಕಾಂಗ್ರೆಸ್ ನಾಯಕರು ಅನೇಕ ಯಾತ್ರೆಗಳನ್ನು ಮಾಡುತ್ತಿದ್ದು ಅವರದು ಬುರುಡೆ ಯಾತ್ರೆ ಎಂದು ಟೀಕಿಸಿದರು.

ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷರಿಗೆ ಮತಿಭ್ರಮಣೆ, ಕೊತ್ವಾಲನ ಜಪ ಮಾಡ್ತಿದ್ದಾರೆ: ಬಿ.ಕೆ.ಹರಿಪ್ರಸಾದ್

ABOUT THE AUTHOR

...view details