ಹಾವೇರಿ: ಇಲ್ಲಿನ ಹಂಚಿನಮನಿ ಆರ್ಟ್ ಗ್ಯಾಲರಿಯಲ್ಲಿ ಏಕವ್ಯಕ್ತಿ ಚಿತ್ರ ಕಲಾ ಪ್ರದರ್ಶನ ಏರ್ಪಡಿಸಲಾಗಿದೆ. ಹಿರಿಯ ಚಿತ್ರಕಲಾವಿದ ಕೆ.ಬಿ.ಕುಲಕರ್ಣಿ ಅವರ ಕಲಾ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಸುಮಾರು 65ಕ್ಕೂ ಅಧಿಕ ಚಿತ್ರಗಳನ್ನ ಪ್ರದರ್ಶನಕ್ಕೆ ಇಡಲಾಗಿದೆ. ಅಧ್ಯಾತ್ಮಿಕ, ಪ್ರಾಕೃತಿಕ ಹಾಗೂ ಭಾವಚಿತ್ರ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸುಮಾರು 65 ಚಿತ್ರಗಳನ್ನ ಪ್ರದರ್ಶಿಸಲಾಗುತ್ತದೆ. ಜೂ.4ರಂದು ಚಿತ್ರ ಪ್ರದರ್ಶನ ಆರಂಭವಾಗಿದ್ದು, ಜೂ.10ರವರೆಗೆ ನಡೆಯಲಿದೆ.
ಕಲಾವಿದ ಕುಲಕರ್ಣಿ ಬಗ್ಗೆ ಒಂದಿಷ್ಟು..ಕೆ.ಬಿ.ಕುಲಕರ್ಣಿ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ವಾಡಿ ಗ್ರಾಮದವರು. ಪ್ರಾಥಮಿಕ ಶಿಕ್ಷಣ ಪೂರೈಸಿದ್ದ ಅವರು ಬಳಿಕ ಬೆಂಗಳೂರಿನ ಪ್ರತಿಷ್ಠಿತ ಕೆನ್ ಸ್ಕೂಲ್ ಆಪ್ ಆರ್ಟ್ ಸ್ಕೂಲ್‌ನಲ್ಲಿ ವ್ಯಾಸಂಗ ಮಾಡಿ ಚಿತ್ರಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ನಾಗಮಂಗಲ ಸೇರಿದಂತೆ ವಿವಿಧ ಕಡೆ ತಾವು ಕಂಡ ದೃಶ್ಯಗಳನ್ನು ಹಾಗೂ ಘಟನೆಗಳನ್ನು ಕುಲಕರ್ಣಿ ಚಿತ್ರಕಲೆಯಲ್ಲಿ ಅನಾವರಣಗೊಳಿಸಿದ್ದಾರೆ. ಕೇವಲ ಕರ್ತವ್ಯ ನಿರ್ವಹಿಸುವ ಸ್ಥಳದಲ್ಲಿ ಮಾತ್ರವಲ್ಲದೇ ತಾವು ಪ್ರವಾಸ ಕೈಗೊಂಡ ರಮ್ಯತಾಣಗಳನ್ನ ಸಹ ಕುಲಕರ್ಣಿ ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ. ಪ್ರಾಕೃತಿಕ ಚಿತ್ರಗಳು, ಹಿಮಾಲಯ, ಕೇದಾರನಾಥ, ಕನ್ಯಾಕುಮಾರಿ ಸೇರಿದಂತೆ ವಿವಿಧ ಪುಣ್ಯಕ್ಷೇತ್ರಗಳು ಚಿತ್ರ ಪ್ರೇಮಿಗಳನ್ನ ಕೈ ಬೀಸಿ ಕರೆಯುತ್ತಿವೆ.
ಪುರಾಣಗಳ ಚಿತ್ರಣಗಳಿಗೆ ಹೊಸ ಆಯಾಮ:ನದಿ, ಜಲಪಾತ, ಹಿಮ, ಬೆಟ್ಟ ಗುಡ್ಡ ಮಳೆ ಚಿತ್ರಣಗಳು ಕುಲಕರ್ಣಿ ಅವರ ಪ್ರಕೃತಿ ಪ್ರೇಮವನ್ನು ಸಾರುತ್ತಿವೆ. ಕುಲಕರ್ಣಿಯವರು ಅಧ್ಯಾತ್ಮವನ್ನ ಕೂಡ ಚಿತ್ರ ಕಲೆಯಲ್ಲಿ ಇಳಿಸುವ ಪ್ರಯತ್ನ ಮಾಡಿದ್ದಾರೆ. ವೇದ, ಭಗವದ್ಗೀತೆ, ರಾಮಾಯಣ ಹಾಗೂ ಮಹಾಭಾರತ ಪುರಾಣಗಳ ಚಿತ್ರಣಗಳಿಗೆ ಕುಲಕರ್ಣಿ ಹೊಸ ಆಯಾಮ ನೀಡಿದ್ದಾರೆ.
ನೂರಾರು ಚಿತ್ರ ಕಲಾವಿದರನ್ನ ಸೃಷ್ಟಿಸಿದ ಖ್ಯಾತಿ:77 ಇಳಿ ವಯಸ್ಸಿನಲ್ಲಿ ತಮ್ಮ ಕೈಗಳು ನಡುಗುತ್ತಿದ್ದರೂ ಕುಲಕರ್ಣಿ ಚಿತ್ರ ಪ್ರೇಮವನ್ನು ಬಿಟ್ಟಿಲ್ಲ. ನಡುಗುವ ಕೈಯಗಳಲ್ಲಿ ಕುಂಚ ಹಿಡಿದರೆ ತಾವು ಯಾವ ಕಲಾವಿದನಿಗೆ ಕಡಿಮೆ ಇಲ್ಲ ಎನ್ನುವಂತೆ ಚಿತ್ರ ರಚಿಸುತ್ತಾರೆ. ಇವರ ಕಲಾ ಪ್ರೇಮ ಯುವ ಕಲಾವಿದರನ್ನ ನಾಚಿಸುವಂತಿದೆ. ಕೇವಲ ಚಿತ್ರ ಬಿಡಿಸುವುದಷ್ಟೇ ಅಲ್ಲದೆ ನೂರಾರು ಚಿತ್ರ ಕಲಾವಿದರನ್ನ ಸೃಷ್ಟಿಸಿದ ಖ್ಯಾತಿ ಕುಲಕರ್ಣಿ ಅವರದ್ದು.