ಹಾವೇರಿ:ಒಂದೂವರೆ ಶತಮಾನದಷ್ಟು ಇತಿಹಾಸ ಹೊಂದಿರುವ ಬಿಎಸ್ಎನ್ಎಲ್ ಕಂಪನಿ ಮುಚ್ಚುವ ಹಂತ ತಲುಪಿದ್ದು, ಇದೇ ಜನವರಿ 31ಕ್ಕೆ ಭಾರತದಲ್ಲಿ ಒಟ್ಟು 90 ಸಾವಿರ ಉದ್ಯೋಗಿಗಳು ಸ್ವಯಂ ನಿವೃತ್ತಿ ಹೊಂದಲಿದ್ದಾರೆ.
ಜನವರಿ 31ಕ್ಕೆ 90 ಸಾವಿರ BSNL ಉದ್ಯೋಗಿಗಳ ಸ್ವಯಂ ನಿವೃತ್ತಿ ಭಾರತದಲ್ಲಿ ಒಟ್ಟು 1.5 ಲಕ್ಷ ಉದ್ಯೋಗಿಗಳನ್ನು ಹೊಂದಿದ್ದ ಭಾರತ ಸಂಚಾರ ನಿಗಮ ಲಿಮಿಟೆಡ್ ಕಂಪನಿಯು ಕೇಂದ್ರ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿ ಬೆಳೆಯಿತು. ಆದರೆ, ಖಾಸಗಿ ಕಂಪನಿಗಳ ಪ್ರಭಾವ ಹಾಗೂ ತ್ವರಿತ ಸೇವೆಗಳ ನಡುವೆ ಬಿಎಸ್ಎನ್ಎಲ್ ಸಂಸ್ಥೆಗೆ ತೀವ್ರ ಹಿನ್ನಡೆ ಉಂಟಾದ ಕಾರಣ ಕಂಪನಿ ಮುಚ್ಚುವ ಹಂತಕ್ಕೆ ಬಂದಿದೆ.
ಕೇಂದ್ರ ಸರ್ಕಾರ ಕೂಡಾ ಈ ಬೃಹತ್ ಸಂಸ್ಥೆಯ ಬಗ್ಗೆ ಯಾವುದೇ ಕಾಳಜಿವಹಿಸಿದ ಕಾರಣ ಇಲ್ಲಿನ ಉದ್ಯೋಗಿಗಳು ಸಂಕಷ್ಟದಲ್ಲಿದ್ದಾರೆ. ಬಿಎಸ್ಎನ್ಎಲ್ ಸಂಸ್ಥೆಯಲ್ಲಿ 50 ವರ್ಷ ಮೇಲ್ಪಟ್ಟ ಉದ್ಯೋಗಿಗಳು ಸ್ವಯಂನಿವೃತ್ತಿ ಹೊಂದುವಂತೆ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ನೋಟಿಸ್ ಅನ್ನು ಕಚೇರಿಯ ಮುಂಭಾಗ ಅಂಟಿಸಲಾಗಿದ್ದು, ಸುಮಾರು 90 ಸಾವಿರ ಉದ್ಯೋಗಿಗಳು ಜನವರಿ 31ರಂದು ತಮ್ಮ ಉದ್ಯೋಗ ತೊರೆಯಲಿದ್ದಾರೆ. ಹೀಗಾಗಿ ಕಂಪನಿಯ ಒಳಗೆ 50 ವರ್ಷ ವಯಸ್ಸಿನೊಳಗಿನ ಸುಮಾರು 60 ಸಾವಿರ ಉದ್ಯೋಗಿಗಳು ಮಾತ್ರ ಉಳಿದುಕೊಳ್ಳಲಿದ್ದಾರೆ.
ರಾಣೆಬೆನ್ನೂರು ನಗರದ ಬಿಎಸ್ಎನ್ಎಲ್ ಕಚೇರಿಯಲ್ಲಿರುವ 26 ಜನ ಉದ್ಯೋಗಿಗಳಲ್ಲಿ 17 ಜನ ಉದ್ಯೋಗಿಗಳು ಜನವರಿ 31ರಂದು ಸ್ವಯಂನಿವೃತ್ತಿ ಹೊಂದಲಿದ್ದಾರೆ ಎಂದು ಎಐಬಿಡಿಪಿಎ ವಲಯದ ಉಪಕಾರ್ಯದರ್ಶಿ ಲಿಂಗರಾಜ ದುರ್ಗದ ಮಾಹಿತಿ ನೀಡಿದರು.