ಹಾಸನ:ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಜ್ಯೋತಿ ಬೆಳಗುವುದರ ಮೂಲಕ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ವೇತಾ ದೇವರಾಜ್ ಉದ್ಘಾಟಿಸಿದರು.
ಹಾಸನದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ.. ಬಳಿಕ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳಿವೆ. ಅದರಲ್ಲಿ ಮುಖ್ಯವಾಗಿ ಕನ್ನಡದ ಮೊಟ್ಟ ಮೊದಲ ಶಾಸನವಾದ ಹಲ್ಮಿಡಿ ಶಾಸನ ಸಿಕ್ಕಿರುವುದು ಹೆಮ್ಮೆ ಪಡುವ ವಿಷಯ. ಬೇಲೂರು, ಹಳೇಬೀಡು ಹಾಗೂ ಶ್ರವಣಬೆಳಗೊಳ ಸೇರಿದಂತೆ ನಾನಾ ಪ್ರವಾಸಿ ಸ್ಥಳಗಳನ್ನು ಹಾಸನ ಜಿಲ್ಲೆಯಲ್ಲಿ ಕಾಣಬಹುದು. ಹಳೆಯ ಕಾಲದ ದೇವಸ್ಥಾನ ನೋಡಲು ದೂರದ ಸ್ಥಳಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹೋಗುತ್ತಿದ್ದಾರೆ.
ಸಕಲೇಶಪುರ ತಾಲೂಕಿನಲ್ಲಿ ಕಾಡುಗಳು, ಬೆಟ್ಟ, ಗುಡ್ಡಗಳ ಉತ್ತಮ ಪರಿಸರ ವೀಕ್ಷಣೆಗೆ ಅನೇಕರು ದೂರದ ಸ್ಥಳಗಳಿಂದ ಬರುತ್ತಾರೆ. ಸಕಲೇಶಪುರದಲ್ಲಿರುವ ಕಾಡುಮನೆ ಎಸ್ಟೇಟ್ ಇವೆಲ್ಲಾ ನಮ್ಮ ಕಣ್ಣ ಮುಂದೆ ಇನ್ನು ಹಚ್ಚ ಹಸಿರಾಗಿ ಉಳಿದಿದೆ. ನಾವು ಉಸಿರಾಡುತ್ತಿದ್ದೇವೆ ಎಂದರೇ ಉತ್ತಮ ಪರಿಸರದಿಂದ, ಅದನ್ನು ಸಂರಕ್ಷಣೆ ಮಾಡಲು ಹೆಚ್ಚಿನ ಒತ್ತು ಕೊಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಕುರಿತು ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಇದೇ ವೇಳೆ ನೀಡಲಾಯಿತು. ನಂತರ ಕಲಾಭವನದ ಆವರಣದಲ್ಲಿ ಫಲಾನುಭವಿಗಳಿಗೆ ಪ್ರವಾಸಿಗರನ್ನು ಕೊಂಡುಯ್ಯುವ ನೂತನ ವಾಹನದ ಕೀಗಳನ್ನು ಜಿಲ್ಲಾಧಿಕಾರಿ ಆರ್.ಗಿರೀಶ್ ವಿತರಿಸಿದರು. ಇದೇ ವೇಳೆ ಪ್ರವಾಸಿ ತಾಣದ ಕುರಿತು ಕಲಾಭವನದ ಆವರಣದಲ್ಲಿ ಪತ್ರಕರ್ತ ಸಂಘದ ಉಪಾಧ್ಯಕ್ಷರಾದ ಛಾಯಾಗ್ರಹಕ ಪ್ರಕಾಶ್ ಕ್ಯಾಮೆರಾದಲ್ಲಿ ಸೆರೆಯಾದ ಪೋಟೊೋಗ್ರಫಿಯನ್ನು ವೀಕ್ಷಣೆ ಮಾಡಲಾಯಿತು.