ಹಾಸನ:ಸಂವಿಧಾನಬದ್ಧವಾಗಿದೇಶದ ಗೌರವ ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕೆಂಬುದು ನಮ್ಮ ಉದ್ದೇಶ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ. ಶನಿವಾರ ನಗರದ ಪ್ರವಾಸಿ ಮಂದಿರದಲ್ಲಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ, ದೇಶದ ಸಣ್ಣ ಮಗುವಿಗೂ ಕೂಡಾ ಭಾರತ ಅಂದರೆ ಇಂಡಿಯಾ, ಇಂಡಿಯಾ ಅಂದರೆ ಭಾರತ ಎಂದು ತಿಳಿದಿದೆ. ಇದು ಸಂವಿಧಾನವಾಗಿ ಬಂದಿದೆ ಎಂದರು.
ಇಂಡಿಯಾ ಹೆಸರನ್ನು ಭಾರತ ಎಂದು ಮರುನಾಮಕರಣ ಮಾಡುವ ಕೇಂದ್ರ ಸರ್ಕಾರದ ನಡೆಗೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಸಚಿವರುಗಳು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ವಿಧಾನಸೌಧದಲ್ಲಿ ಇತ್ತೀಚೆಗೆ ಸಿದ್ದರಾಮಯ್ಯ ಮಾತನಾಡುತ್ತಾ, ಭಾರತವನ್ನು ಸಂವಿಧಾನದಲ್ಲಿ ಇಂಡಿಯಾ ಎಂದೇ ಉಲ್ಲೇಖಿಸಲಾಗಿದೆ. ಇಂಡಿಯಾ ಎಂಬುದು ಎಲ್ಲರೂ ಒಪ್ಪಿರುವ ಹೆಸರು. ಭಾರತ ಎಂದು ಮರುನಾಮಕರಣ ಮಾಡುವ ಅಗತ್ಯವಿಲ್ಲ ಎಂದಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಕೂಡಾ ಹೆಸರು ಬದಲಾವಣೆಗೆ ಆಕ್ಷೇಪಿಸಿದ್ದರು. ಕನಕಪುರದಲ್ಲಿ ಮಾತನಾಡಿದ್ದ ಅವರು, ಪ್ರತಿಪಕ್ಷಗಳ ಮೈತ್ರಿಕೂಟಕ್ಕೆ ಹೆದರಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ರಿಪಬ್ಲಿಕ್ ಆಫ್ ಇಂಡಿಯಾವನ್ನು ರಿಪಬ್ಲಿಕ್ ಆಫ್ ಭಾರತ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದ್ದರು.