ನಾವಾಗಿ ನಾವೇ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಳ್ಳಲು ನಮ್ಮ ಪಕ್ಷದಲ್ಲಿ ಅವಕಾಶ ಇಲ್ಲ: ಶಾಸಕ ಪ್ರೀತಂ ಗೌಡ ವ್ಯಂಗ್ಯ ಹಾಸನ: 2023ರ ವಿಧಾನಸಭಾ ಚುನಾವಣೆಯಲ್ಲಿ ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದು, ಆದರೇ ನಾನೇ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಳ್ಳಲು ಬಿಜೆಪಿ ಪಕ್ಷದಲ್ಲಿ ಅವಕಾಶವಿಲ್ಲ ಎಂದು ಭವಾನಿ ರೇವಣ್ಣ ಅವರಿಗೆ ಪರೋಕ್ಷವಾಗಿ ಶಾಸಕ ಪ್ರೀತಂ ಜೆ. ಗೌಡ ಅವರು ಟಾಂಗ್ ಕೊಟ್ಟಿದ್ದಾರೆ. ಗುರುವಾರ ಮಾಧ್ಯಮದೊಂದಿಗೆ ಮಾತನಾಡಿ ಅವರು, ಹಾಸನ ಕ್ಷೇತ್ರದ ಶಾಸಕನಾಗಿ ನಾನು ಕಳೆದ ಐದು ವರ್ಷಗಳಿಂದ ಜನರ ನಡುವೆ ಕೆಲಸ ಮಾಡುತ್ತಿದ್ದೇನೆ. ಬೇರೆ ಪಕ್ಷದ ಆಕಾಂಕ್ಷಿಗಳಂತೆ ನಾನು ಟಿಕೆಟ್ ಆಕಾಂಕ್ಷಿ ಆಗಿದ್ದೇನೆ. ಪಕ್ಷದ ವರಿಷ್ಠರಿಗೆ ಹಾಗೂ ಹಿರಿಯರಿಗೆ ಇನ್ನೊಮ್ಮೆ ಅವಕಾಶ ಕೊಡಿ ಎಂದು ಕೇಳಿದ್ದೇನೆ. ಆದರೆ, ಹಾಸನದಿಂದ ಬಿಜೆಪಿ ಟಿಕೆಟ್ ತಮಗೆ ಎಂದು ಅಂತಿಮ ಆಗಿಲ್ಲ ಎಂದು ಪುನರುಚ್ಚಾರ ಮಾಡಿ ಹೇಳಿದರು.
ಟಿಕೆಟ್ ಹಂಚಿಕೆಯ ಬಗ್ಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲೂ ಚರ್ಚೆ ನಡೆಯುತ್ತಿದೆ. ನಾಮಪತ್ರ ಸಲ್ಲಿಕೆಯಾಗುವ ತನಕ ಜನರ ನಡುವೆ ಎಲ್ಲರೂ ಕೆಲಸ ಮಾಡುತ್ತಾರೆ. ನಾನು ಓರ್ವ ಆಕಾಂಕ್ಷಿಯಾಗಿ, ಶಾಸಕನಾಗಿ ನಾನೂ ಕೆಲಸ ಮಾಡುತ್ತಿದ್ದೇನೆ. ಬಿಜೆಪಿ ಪಕ್ಷದ ವರಿಷ್ಠರು ಯಾರನ್ನು ತೀರ್ಮಾನ ಮಾಡುತ್ತಾರೆ ಅವರು ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿಯಲ್ಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಹಾಸನ: ಸ್ವಪಕ್ಷ ಕಾರ್ಯಕರ್ತನ ಮೇಲೆ ಬಿಜೆಪಿಯ ಗ್ರಾಮಾಂತರ ಉಪಾಧ್ಯಕ್ಷರಿಂದ ಹಲ್ಲೆ
ಕರ್ನಾಟಕದಲ್ಲಿ ಗುಜರಾತ್ ಮಾಡೆಲ್ ಅನ್ವಯ ಆಗುತ್ತೋ ಇಲ್ಲವೋ ನನಗೆ ಅದರ ಬಗ್ಗೆ ಮಾಹಿತಿ ಇಲ್ಲ. ನಮ್ಮದು ರಾಷ್ಟ್ರೀಯ ಪಕ್ಷ, ಚುನಾವಣೆಗಾಗಿ ಒಂದು ಸಮಿತಿ ಇರುತ್ತದೆ. ಅವರು ಯಾವ ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಸೂಕ್ತ ಎಂದು ತೀರ್ಮಾನ ಮಾಡುತ್ತಾರೆ. ಅಲ್ಲಿಯವರೆಗೆ ಕಾದು ನೋಡಬೇಕು, ನಾವಾಗೀ ನಾವೇ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಳ್ಳಲು ನಮ್ಮ ಪಕ್ಷದಲ್ಲಿ ಅವಕಾಶ ಇಲ್ಲ ಎಂದು ಜೆಡಿಎಸ್ ಪಕ್ಷದ ಭವಾನಿ ರೇವಣ್ಣಗೆ ಟಾಂಗ್ ಕೊಟ್ಟರು.
ಭಾರತೀಯ ಜನತಾ ಪಾರ್ಟಿ ಅಧಿಕೃತವಾಗಿ ಪ್ರೀತಂ ಗೌಡ ಹಾಸನ ಅಭ್ಯರ್ಥಿ ಎಂದು ಘೋಷಣೆ ಮಾಡುವವರೆಗೂ ನಾನು ಅಭ್ಯರ್ಥಿ ಎಂದು ಹೇಳಿಕೊಳ್ಳಲು ಬರುವುದಿಲ್ಲ. ಖಂಡಿತ ನಂಬಿಕೆ ಇದೆ. ಆದರೆ, ವರಿಷ್ಠರು ಏನು ಹೇಳುತ್ತಾರೆ ಎಂದು ಕಾದು ನೋಡಬೇಕು. ಅಕಸ್ಮಾತ್ ಚನ್ನರಾಯಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿ ಎನ್ನಬಹುದು, ಹೊಳೆನರಸೀಪುರ ಎಂದು ಹೇಳಬಹುದು. ಪಕ್ಷದ ತೀರ್ಮಾನವನ್ನು ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಪಾಲಿಸಬೇಕಾಗುತ್ತದೆ. ಪಕ್ಷ ಏನು ತಿರ್ಮಾನ ತೆಗೆದುಕೊಳ್ಳುತ್ತದೆ ಎಂದು ಗೊತ್ತಿಲ್ಲದೇ ಮಾತನಾಡಿದರೆ ತಪ್ಪಾಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯ ಏಳು ಕ್ಷೇತ್ರದಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಭಾರತೀಯ ಜನತಾ ಪಾರ್ಟಿ ಗೆದ್ದೇ ಗೆಲ್ಲುತ್ತದೆ. ಈ ಬಾರಿ ಚುನಾವಣೆಯನ್ನು ಯಾವ ರೀತಿ ಮಾಡುತ್ತೇವೆ ನೋಡಿ. ಜಿಲ್ಲೆಯ ಎಲ್ಲ ಕ್ಷೇತ್ರದಲ್ಲೂ ಗೆಲ್ಲುವ ಪ್ರಯತ್ನ ಮಾಡುತ್ತೇವೆ, ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ ಎಂದು ಶಾಸಕ ಪ್ರೀತಂ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ :'ಭವಾನಿ ರೇವಣ್ಣ ಅನಿವಾರ್ಯತೆ ಹಾಸನ ಕ್ಷೇತ್ರಕ್ಕಿದ್ದಿದ್ದರೆ ನಾನೇ ಸ್ಪರ್ಧಿಸುವಂತೆ ಹೇಳುತ್ತಿದ್ದೆ': ಹೆಚ್ಡಿಕೆ