ಹಾಸನ:ನಗರದಲ್ಲಿ ದಿನೇದಿನೆ ಬಿಡಾಡಿ ದನ,ಕರುಗಳ ಹಾವಳಿ ಹೆಚ್ಚಾಗುತ್ತಿದ್ದು ಹೆದ್ದಾರಿಗಳಲ್ಲಿ ಅಡ್ಡಲಾಗಿ ನಿಲ್ಲುವುದರಿಂದ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಗಿದೆ ಅಷ್ಟೇ ಅಲ್ಲದೆ, ಪಾದಾಚಾರಿಗಳಲ್ಲೂ ಜೀವಭಯ ಎದುರಾಗಿದೆ.
ನಗರದ ಎನ್‌ಆರ್‌ವೃತ್ತ, ಬಸ್ ನಿಲ್ದಾಣ ರಸ್ತೆ, ಗಂಧದ ಕೋಟೆ ರಸ್ತೆ, ಎಂಜಿ ರಸ್ತೆ, ಸಾಲಗಾಮೆ ರಸ್ತೆ ಹಾಗೂ ಕೋರ್ಟ್ ರಸ್ತೆಯು ಸದಾ ಜನಸಂದಣಿಯಿಂದ ಕೂಡಿರುತ್ತದೆ. ಈ ಭಾಗಗಳಲ್ಲಿ ದನ, ಕರುಗಳು ಹಿಂಡು ಹಿಂಡಾಗಿ ಅಡ್ಡಾದಿಡ್ಡಿಯಾಗಿ ಸಂಚರಿಸುತ್ತಿವೆ. ಒಮ್ಮೊಮ್ಮೆ ರಸ್ತೆಗೆ ಅಡ್ಡಲಾಗಿ ಠಿಕಾಣಿ ಹೂಡುತ್ತವೆ. ಇದರಿಂದ ರಸ್ತೆಗಳಲ್ಲಿ ವಾಹನ ಚಲಾಯಿಸುವುದು ಸವಾರರಿಗೆ ದೊಡ್ಡ ಸವಾಲಾಗಿದೆ.
ಹಾಸನದಲ್ಲಿ ಬಿಡಾಡಿ ದನಗಳ ಹಾವಳಿ.. ರಸ್ತೆಗೆ ಅಡ್ಡಲಾಗಿ ಠಿಕಾಣಿ ಹೂಡುವುದರಿಂದ ಈಗಾಗಲೇ ಅದೆಷ್ಟೋ ರಸ್ತೆ ಅಪಘಾತಗಳು ಸಂಭವಿಸಿದ್ದರೂ ಈ ಬಗ್ಗೆ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ ಸ್ಥಳೀಯರು. ಇನ್ನು ಸಾರ್ವಜನಿಕರು ಮಾತ್ರವಲ್ಲದೇ ಶಾಲಾ-ಕಾಲೇಜಿಗೆ ತೆರಳುವ ಮಕ್ಕಳಿಗೆ ಬಿಡಾಡಿ ದನಗಳ ಸಮಸ್ಯೆ ಕಾಡುತ್ತಿದೆ. ಮಕ್ಕಳು ಶಾಲೆಗೆ ಹೋಗಲು ಹಾಗೂ ಹಿಂತಿರುಗಲು ಪೋಷಕರನ್ನು ಅವಲಂಬಿಸಬೇಕಾದ ಪರಿಸ್ಥಿತಿ ಇದೆ.
ಕೆಲ ದಿನಗಳ ಹಿಂದೆಯಷ್ಟೇ ಬಿಡಾಡಿ ದನಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆ ಅರಿತು ಬೀದಿಯಲ್ಲಿ ತಿರುಗೋ ದನಗಳನ್ನು ಹಿಡಿದು ಮಾಲೀಕರಿಗೆ ದಂಡ ವಿಧಿಸಿ ವಾರ್ನಿಂಗ್ ನೀಡಿ ಕಳಿಸಿದ್ದರು. ಇದಕ್ಕೆ ಕ್ಯಾರೆ ಎನ್ನದ ದನಕರುಗಳ ಮಾಲೀಕರು ಬೆಳಗ್ಗೆ ಮತ್ತು ಸಂಜೆ ಹಾಲು ಕರೆದುಕೊಂಡು ನಂತರ ಎಲ್ಲಾದರೂ ಮೇಯ್ಕೊಂಡು ಬರ್ಲಿ ಅಂತಾ ಬಿಡುತ್ತಿರುವುದರಿಂದ ಈ ಸಮಸ್ಯೆ ಎದುರಾಗಿದ್ದು, ಈ ಬಗ್ಗೆ ಇನ್ನಾದರೂ ನಗರಸಭೆ ಅಧಿಕಾರಿಗಳು ಎಚ್ಚೆತ್ತು ಸಮಸ್ಯೆಗೊಂದು ಶಾಶ್ವತ ಪರಿಹಾರ ಕಲ್ಪಿಸುವರೇ ಕಾದು ನೋಡಬೇಕಿದೆ.