ಹಾಸನ: ಇನ್ನುಳಿದ ಎರಡು ವರ್ಷ ಬಿ.ಎಸ್.ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿ ಇರುತ್ತಾರೆ. ಯಾವುದೇ ಬದಲಾವಣೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ, ಯಡಿಯೂರಪ್ಪ ಸಿಎಂ ಆಗಿರ್ತಾರೆ: ಸಚಿವ ಕೆ.ಗೋಪಾಲಯ್ಯ - ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆ
ಎರಡು ದಿನ ನಡೆಯುವ ಬಿಜೆಪಿ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ರಾಜ್ಯ ಹಾಗೂ ತಳಮಟ್ಟದಿಂದ ಪಕ್ಷ ಸಂಘಟನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ. ಕಾರ್ಯಕಾರಿಣಿ ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದು ಸಚಿವ ಕೆ.ಗೋಪಾಲಯ್ಯ ಹೇಳಿದ್ದಾರೆ.
ಇದೇ ತಿಂಗಳ 18 ಮತ್ತು 19ರಂದು ನಡೆಯಲಿರುವ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆ ನಡೆಯುವ ಸ್ಥಳದ ಪೂಜಾ ಕಾರ್ಯಕ್ರಮದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಪಕ್ಷದಲ್ಲಿ ಗೊಂದಲ ಇರಬಹುದು. ಆದರೆ ಅವೆಲ್ಲವನ್ನು ಆಂತರಿಕವಾಗಿ ಬಗೆಹರಿಸಿಕೊಂಡು ಪಕ್ಷ ಸಂಘಟನೆ ಮಾಡುತ್ತೇವೆ.
ಯತ್ನಾಳ್ಗೆ ಈಗಾಗಲೇ ನೋಟಿಸ್ ಕೊಡಲಾಗಿದೆ. ಪಕ್ಷದ ವರಿಷ್ಠರು ಗಮನಿಸುತ್ತಿದ್ದು, ಸೂಕ್ತ ಸಂದರ್ಭದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ವಿರೋಧ ಪಕ್ಷದ ನಾಯಕರು ಏನು ಮಾತನಾಡಬೇಕು ಮಾತನಾಡಿದ್ದಾರೆ. ಶಾಸಕರಿಗೆ ಹಣ ಬಿಡುಗಡೆ ಮಾಡುವುದು ಸಿಎಂ ಪರಮಾಧಿಕಾರ. ಅದನ್ನು ಮಾಡಿದ್ದಾರೆ ಅಂತ ಸಿದ್ದರಾಮಯ್ಯನವರ ಕಮಿಷನ್ ವಿಚಾರದ ಬಗ್ಗೆ ಪ್ರತ್ಯುತ್ತರ ನೀಡಿದರು. ಬಿಜೆಪಿ ದೇಶದ ಪ್ರಮುಖ ದೊಡ್ಡ ಪಕ್ಷ. ಉಪಚುನಾವಣೆಯಲ್ಲಿ ನೂರಕ್ಕೆ ನೂರು ಮೂರು ಕ್ಷೇತ್ರಗಳಲ್ಲೂ ಹೆಚ್ಚು ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಜಯ ಗಳಿಸಲಿದ್ದಾರೆ ಎಂದರು.