ಹಾಸನ: ಅಧಿದೇವತೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆದ ಮೊದಲ ದಿನ ಮತ್ತು ಬಾಗಿಲು ಹಾಕುವ ಕೊನೆಯ ದಿನದಂದು ಆಹ್ವಾನಿತರು ಬಿಟ್ಟರೆ ಮಧ್ಯೆ ಯಾರೇ ಬಂದರೂ ಒಳ ಪ್ರವೇಶ ಇರುವುದಿಲ್ಲ. ಏನಾದರೂ ಅವಕಾಶ ಮಾಡಿಕೊಟ್ಟರೆ ಜಿಲ್ಲಾಡಳಿತ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಶಾಸಕ ಪ್ರೀತಮ್ ಜೆ. ಗೌಡ ತಿಳಿಸಿದರು.
ಹಾಸನಾಂಬೆ ದೇವಾಲಯದ ಪೂರ್ವ ಸಿದ್ಧತೆ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಇರುವ ಹಿನ್ನೆಲೆಯಲ್ಲಿ ಈ ವರ್ಷ ಸಾರ್ವಜನಿಕರಿಗೆ ಪ್ರವೇಶ ನಿಷೇಧಿಸಲಾಗಿದೆ. ವಿಐಪಿಗಳು ಬರುವುದಾದರೆ ಮೊದಲ ದಿನ ಮತ್ತು ಕೊನೆಯ ದಿನ ಮಾತ್ರ ಬರಬಹುದಾಗಿದೆ. ಮಧ್ಯೆ ಯಾರಾದರೂ ಬರಲು ಮುಂದಾದರೆ ಅವಕಾಶ ಕೊಡಬಾರದು. ಇದು ನನ್ನನ್ನು ಸೇರಿ ಅನ್ವಯಿಸುತ್ತದೆ ಎಂದರು.
ಹಾಸನಾಂಬೆ ದೇವಾಲಯಕ್ಕೆ ಶಾಸಕ ಪ್ರೀತಮ್ ಗೌಡ ಭೇಟಿ
ದೇವಾಲಯಕ್ಕೆ ಬರುವುದಾದರೆ ಗೋಪುರದ ಹೊರಗೆ ನಿಂತು ನಮಸ್ಕರಿಸಲು ಅವಕಾಶ ಮಾಡಲಾಗಿದೆ. ಎಲ್.ಇ.ಡಿ. ಮೂಲಕ ದೇವಸ್ಥಾನದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ದೇವಿ ಜಾತ್ರೆಯ ಆಹ್ವಾನ ಪತ್ರಿಕೆಯನ್ನು ಯಾರಿಗೆ ನೀಡಿದ್ದೇವೆಯೋ ಅವರು ನಿಗದಿ ಮಾಡಿದ ದಿನದಲ್ಲೇ ಬಂದು ಹೋಗಬಹುದು. ಈಗಾಗಲೇ ಮುಖ್ಯಮಂತ್ರಿಗಳು ಕೂಡ ಹಾಸನಾಂಬೆ ದೇವಿ ದರ್ಶನಕ್ಕೆ ಬಾರದೆ ಕಾನೂನು ಪಾಲಿಸಲು ಮನವಿ ಮಾಡಿದ್ದಾರೆ.
ಕಳೆದ ಒಂದು ವಾರದಿಂದ ಕೊರೊನಾ ಗಣನೀಯವಾಗಿ ಕಡಿಮೆಯಾಗುತ್ತಿದೆ. ಹಾಸನಾಂಬೆ ಆಶೀರ್ವಾದದಿಂದ ಕೊವೀಡ್ ಕಡಿಮೆಯಾಗಲು ದೇವರಲ್ಲಿ ಪ್ರಾರ್ಥಿಸಲಾಗುವುದು. ಇದೇ ವೇಳೆ ಜಿಲ್ಲಾ ಉಪವಿಭಾಗಾಧಿಕಾರಿ ಬಿ.ಎ. ಜಗದೀಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ, ಹೆಚ್ಚುವರಿ ಪೊಲೀಸ್ ಅಧಿಕಾರಿ ನಂದಿನಿ, ತಹಸೀಲ್ದಾರ್ ಶಿವಶಂಕರಪ್ಪ ಇತರರು ಪಾಲ್ಗೊಂಡಿದ್ದರು.