ಹಾಸನ: ಕೌಟುಂಬಿಕ ಕಲಹ ಹಿನ್ನೆಲೆ ಪತಿಯೋರ್ವ ಪತ್ನಿಯನ್ನು ದಾರುಣವಾಗಿ ಹತ್ಯೆಗೈದಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಹುಬ್ಬಳ್ಳಿ ಮೂಲದ ಜ್ಯೋತಿ (22) ಎಂದು ಗುರುತಿಸಲಾಗಿದೆ. ರಾಂಪುರ ಗ್ರಾಮದ ಜೀವನ್ ಕೊಲೆಗೈದ ಆರೋಪಿ ಎಂದು ಹೇಳಲಾಗಿದೆ.
ಮೃತ ಜ್ಯೋತಿ ಮತ್ತು ಜೀವನ್ ಪರಸ್ಪರ ಪ್ರೀತಿಸುತ್ತಿದ್ದರು. ಕಳೆದ ಆರು ತಿಂಗಳ ಹಿಂದೆಯಷ್ಟೇ ಇಬ್ಬರು ಮದುವೆಯಾಗಿದ್ದರು. ಮದುವೆಯಾದ ಬಳಿಕ ದಂಪತಿ ನಡುವೆ ಕ್ಷುಲ್ಲಕ ಕಾರಣಕ್ಕೆ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ. ಅಲ್ಲದೆ ಪತ್ನಿ ಮಾಡರ್ನ್ ಬಟ್ಟೆ ತೊಡುವ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿತ್ತು ಎಂದು ಹೇಳಲಾಗಿದೆ.
ಕಳೆದ ಡಿಸೆಂಬರ್ 30ರಂದು ಜೀವನ್, ಜ್ಯೋತಿಯನ್ನು ಡ್ರಾಪ್ ನೀಡುವ ನೆಪದಲ್ಲಿ ಜೆಸಿಪುರದ ಬಳಿ ಇರುವ ರಾಂಪುರ ಅರಣ್ಯ ಪ್ರದೇಶದಲ್ಲಿ ಕರೆತಂದು ಹತ್ಯೆಗೈದು ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಆರೋಪಿ ಪತಿ ಜೀವನ್ ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಎಫ್ಐಆರ್ ವಿವರ : ರಾಂಪುರ ಗ್ರಾಮದ ಜೀವನ್ ರಾಗಿ ಕಟಾವು ಯಂತ್ರವನ್ನು ನಿರ್ವಹಣೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕಳೆದ ಎರಡು ವರ್ಷದ ಹಿಂದೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡುವಾಗ ಜ್ಯೋತಿ ಎಂಬರನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಜೀವನ್ ಕುರ್ಕೆ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.
ಡಿಸೆಂಬರ್ 30ರಂದು ಸುಮಾರು ಮ. 3 ಗಂಟೆ ಹೊತ್ತಿಗೆ ರಾಂಪುರದಲ್ಲಿರುವ ಜಮೀನು ಒಂದರಲ್ಲಿ ಜೀವನ್ ಮತ್ತು ಜ್ಯೋತಿ ಪರಸ್ಪರ ಜಗಳವಾಡುತ್ತಿದ್ದರು. ಈ ವೇಳೆ ಜೀವನ್ ಜ್ಯೋತಿ ಮೇಲೆ ಹಲ್ಲೆ ನಡೆಸಿದ್ದ. ಹಲ್ಲೆಯಿಂದ ಗಂಭೀರ ಗಾಯಗೊಂಡ ಜ್ಯೋತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಜ್ಯೋತಿ ಅವರ ಕುತ್ತಿಗೆ ಮತ್ತು ಎದೆಯ ಭಾಗಕ್ಕೆ ಹರಿತವಾದ ಆಯುಧದಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ. ಇದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು.
ಜೀವನ್ ಮತ್ತು ಜ್ಯೋತಿ ಪರಸ್ಪರ ಪ್ರೀತಿಸಿ ಮದುವೆ ಮಾಡಿಕೊಂಡಿದ್ದು, ಯಾವ ಕಾರಣಕ್ಕೆ ಕೊಲೆ ಮಾಡಿದ್ದಾರೆ, ಯಾವ ದುರುದ್ದೇಶ ಇಟ್ಟುಕೊಂಡಿದ್ದರು ಎಂಬುದು ಗೊತ್ತಿಲ್ಲ ಎಂದು ದೂರುದಾರರು ಎಫ್ಐಆರ್ನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ :ಕೌಟುಂಬಿಕ ಕಲಹ: ಪತ್ನಿ, ಇಬ್ಬರು ಮಕ್ಕಳ ಭೀಕರ ಕೊಲೆ