ಹೊಳೆನರಸೀಪುರ(ಹಾಸನ): ಜಿಲ್ಲೆಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಇದು ಮಾಂಸಹಾರಿಗಳ ನಿದ್ದೆಗೆಡಿಸುವಂತೆ ಮಾಡಿದೆ.
ಒಂದೇ ಸ್ಥಳದಲ್ಲಿ ನೂರಾರು ಶ್ವಾನಗಳ ತಲೆಬುರುಡೆಗಳು ಪತ್ತೆ! ಹೌದು, ಹೊಳೆನರಸೀಪುರ ತಾಲೂಕಿನ ಸೂರನಹಳ್ಳಿ ಗ್ರಾಮದ ಸಮೀಪವಿರುವ ಕೊಲ್ಲಿ ಹಳ್ಳ ಎಂಬ ಪ್ರದೇಶದಲ್ಲಿ ನೂರಾರು ಸಂಖ್ಯೆಯಲ್ಲಿ ಶ್ವಾನಗಳ ತಲೆಬುರುಡೆಗಳು ಪತ್ತೆಯಾಗಿವೆ. ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲುವ ತಂಡ ಕಾರ್ಯಾಚರಣೆ ನಡೆಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ನಾಯಿಗಳ ರುಂಡದ ಭಾಗ ಮಾತ್ರ ಪತ್ತೆಯಾಗಿರುವ ಕೊಲ್ಲಿಹಳ್ಳ ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ದಟ್ಟ ಬೇಲಿ ಬೆಳೆದು ನಿರ್ಜನ ಪ್ರದೇಶವಾಗಿದೆ. ಹಾಗಾಗಿ ಮಾಂಸಕ್ಕಾಗಿ ನಾಯಿಗಳನ್ನು ಕೊಲ್ಲುವವರು ಬುರುಡೆಗಳನ್ನು ತಂದು ಎಸೆಯಲು ಈ ಪ್ರದೇಶವನ್ನು ಆಯ್ಕೆ ಮಾಡಿಕೊಂಡಿರಬಹುದು ಎಂದು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಶ್ವಾನಗಳ ಮಾರಣಹೋಮದ ವಿರುದ್ಧ ಪ್ರಾಣಿ ಪ್ರಿಯರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈಗಾಗಲೇ ಪಟ್ಟಣದ ಮಾಂಸ ಪ್ರಿಯರು ಕಂಗಾಲಾಗಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಸೂಕ್ತ ತನಿಖೆ ನಡೆಸಿ ನಾಯಿಗಳ ಮಾರಣಹೋಮ ನಡೆಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.