ಹಾಸನ:ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಚಿರತೆಗಳನ್ನು ಕೊಂದು, ಉಗುರು ಮತ್ತು ಮೂಳೆ ಮಾರಾಟ ಮಾಡಲು ಯತ್ನಿಸಿದ 8 ಮಂದಿ ಆರೋಪಿಗಳನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ. ಬೇಲೂರು ಹಾಗೂ ಆಲೂರು ಅರಣ್ಯ ವಲಯ ಪ್ರದೇಶದಲ್ಲಿ ಈ ಪ್ರಕರಣಗಳು ನಡೆದಿವೆ.
ಮೊದಲ ಪ್ರಕರಣ:ಹಳೇಬೀಡು ಹೋಬಳಿಯ ಕೋಮಾರನಹಳ್ಳಿಯಲ್ಲಿ ಸುಮಾರು 3ರಿಂದ 4 ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಚಾನುವಾರು ಹಿಡಿಯಲು ಬಂದಿತ್ತೆಂದು ಉರುಳು ಹಾಕಿ ಕೊಲ್ಲಲಾಗಿತ್ತು. ಬಳಿಕ ಮೂಳೆ ಹಾಗೂ ಉಗುರು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ. ರವಿ, ಮೋಹನ್ ಹಾಗೂ ಮಾರಾಟಕ್ಕೆ ಸಹಾಯ ಮಾಡಿದ ಎಟಿಎಂ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಸ್ವಾಮಿ ಎಂಬುವರೆ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿ ರವಿ ಹಾಗೂ ಮೋಹನ್ ಚಿರತೆ ಕೊಂದು ತಿಪ್ಪೆಯಲ್ಲಿ ಹೂತು ಹಾಕಿದ್ದರು. ಚಿರತೆ ಕೊಂದ ಬಳಿಕ ಏನು ಮಾಡಬೇಕೆಂದು ತೋಚದೇ, ಎಟಿಎಂ ಸೆಕ್ಯೂರಿಟಿ ಗಾರ್ಡ್ ಸ್ವಾಮಿ ಎಂಬಾತನ ಸಹಾಯ ಪಡೆದಿದ್ದರು. ಉಗುರುಗಳನ್ನು ತೆಗೆದುಕೊಂಡ ನಂತರ ಮೃತದೇಹವನ್ನು ಕೋಮಾರನಹಳ್ಳಿಯಲ್ಲಿನ ತಿಪ್ಪೆಗುಂಡಿಯಲ್ಲಿ ಹೂತು ಹಾಕಲಾಗಿತ್ತು. ಬಳಿಕ ಅದರ ಕೆಲ ಮೂಳೆ ಮತ್ತು ಉಗುರುಗಳನ್ನು ಮಾರಾಟ ಮಾಡಲು ಬಂದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಮಾರಾಟ ಮಾಡಲು ಸೆಕ್ಯೂರಿಟಿ ಗಾರ್ಡ್ ಸಹಾಯ ಮಾಡಿದ್ದ.