ಹಾಸನ: ವಿದ್ಯಾರ್ಥಿನಿ ಮೇಲೆ ಸಾರಿಗೆ ಬಸ್ ಹರಿದು ಗಂಭೀರ ಗಾಯಗಳಾಗಿರುವ ಘಟನೆ ಹಾಸನದ ಕೆಎಸ್ಆರ್ಟಿಸಿ ಹೊಸ ಬಸ್ ನಿಲ್ದಾಣದ ಮುಂಭಾಗ ನಡೆದಿದೆ.
ಕೆಹೆಚ್ಬಿ ಬಡಾವಣೆಯ ನಿವಾಸಿ ರೇಷ್ಮ (26) ಗಂಭೀರ ಗಾಯಗೊಂಡಿರುವ ಯುವತಿ. ಬೆಳಿಗ್ಗೆ 10 ಗಂಟೆಗೆ ಕೆಹೆಚ್ಬಿ ಬಡಾವಣೆಯ ತಮ್ಮ ನಿವಾಸದಿಂದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ತಂದೆ ಲಕ್ಷ್ಮೇಗೌಡರಿಗೆ ತಿಂಡಿ ತೆಗೆದುಕೊಂಡು ಹೋಗುತ್ತಿರುವಾಗ ಬಸ್ ನಿಲ್ದಾಣದಿಂದ ವೇಗವಾಗಿ ಬಂದ ಬಸ್ ರಸ್ತೆ ದಾಟುತ್ತಿದ್ದ ಯುವತಿಯ ಮೇಲೆ ಹರಿದಿದೆ. ಪರಿಣಾಮ ಯುವತಿಯ ದೇಹದ ಅರ್ಧ ಭಾಗ ಸಂಪೂರ್ಣ ಛಿದ್ರವಾಗಿದೆ. ಆಸ್ಪತ್ರೆಯಲ್ಲಿ ಯುವತಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.
ಇನ್ನು ಯುವತಿ ಬಿಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ ಎನ್ನಲಾಗಿದೆ. ಈಕೆಯ ತಂದೆ ಲಕ್ಷ್ಮೇಗೌಡ ಹಾಸನದ ಅಲಾನಕಾಫಿಕ್ಯೂರಿಂಗ್ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಇವರ ಮೇಲೂ ಮಿಷಿನ್ ಬಿದ್ದು, ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಹಿನ್ನೆಲೆ ವಿದ್ಯಾರ್ಥಿನಿ ಎಂದಿನಂತೆ ತಿಂಡಿ ತೆಗೆದುಕೊಂಡು ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.